ಕೆಲಸಕ್ಕೆಂದು ಮನೆ ಬಿಟ್ಟು ಹೋದ ವ್ಯಕ್ತಿ ನಾಪತ್ತೆ- ಪೊಲಿಸ್ ದೂರು
ಕುಂದಾಪುರ: ಕೆಲಸಕ್ಕೆ ಬೆಳಿಗ್ಗೆ ಮನೆಯಿಂದ ಹೊರ ಹೋದ ವ್ಯಕ್ತಿಯೊಬ್ಬ ಬೈಕನ್ನು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನಿಲ್ಲಿಸಿ ನಾಪತ್ತೆಯಾದ ಘಟನೆ ನಡೆದಿದೆ. ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಗ್ರಾಮದ ಗಣಪತಿ ನಾಯಕ್ (57) ಎಂಬುವರೇ ನಾಪತ್ತೆಯಾದವರು.

ಗಣಪತಿ ನಾಯಕ್ ಅವರು ಸುಮಾರು 8 ವರ್ಷಗಳಿಂದ ದರ್ಮಸ್ಥಳದ ಸಿರಿ ಗ್ರಾಮೊದ್ಯೋಗ ಸಂಸ್ಥೆಯ ಕುಂದಾಪುರ ಶಾಖೆ ಯಲ್ಲಿ ಹೋಂ ಪ್ರಾಡೆಕ್ಟ ಡಿಸ್ಟಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಎಂಟು ಗಂಟೆ ಸುಮಾರಿಗೆ ಅವರು ತಮ್ಮ ಸ್ಕೂಟರ್ ನಲ್ಲಿ ಹೊರಟಿದ್ದರು. ಆದರೆ ಸಂಜೆ ಮನೆಗೆ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ಶನಿವಾರ ಬೆಳಿಗ್ಗೆ ಅವರ ಸ್ಕೂಟರ್ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನಿಲ್ಲಿಸಿದ್ದು ಪತ್ತೆಯಾಗಿತ್ತು. ಶನಿವಾರ ಬೆಳಗ್ಗಿನ ಜಾವ ಸ್ಕೂಟರ್ ಅಲ್ಲಿ ನಿಂತಿದ್ದನ್ನು ಸ್ಥಳೀಯರು ಗಮನಿಸಿದ್ದರು. ಆದರೆ ಗಣಪತಿ ನಾಯಕ್ ಮಾತ್ರ ಪತ್ತೆಯಾಗಿಲ್ಲ.

ಮಿತಭಾಷಿಯಾಗಿದ್ದ ಗಣಪತಿ ನಾಯಕ್ ಯಾರೊಂದಿಗೂ ತಕರಾರು ತೆಗೆದಿಲ್ಲ. ಅಲ್ಲದೇ ಅವರು ತಮ್ಮ ುದ್ಯಮಕ್ಕಾಗಿ ಪಿಕ್ ಅಪ್ ವಾಹನವೊಂದನ್ನು ಪೈನಾನ್ಸ್ ಒಂದರಲ್ಲಿ ಸಾಲ ಮಾಡಿ ಖರೀದಿಸಿದ್ದರು. ಮನೆಯಲ್ಲಿಯೂ ಪತ್ನಿ ಹಾಗೂ ಮಕ್ಕಳೊಂದಿಗೆ ಅನ್ಯೋನ್ಯವಾಗಿದ್ದರು. ಸಾಲದ ಹೊರೆ ಹೊರತುಪಡಿಸಿದರೆ ನಾಪತ್ತೆಯಾಗುವ ಯಾವುದೇ ಕಾರಣಗಳು ಕಾಣುತ್ತಿಲ್ಲವೆಂದು ಮನೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.