ಸೊಸೈಟಿ ದರೋಡೆಗೆ ವಿಫಲ ಯತ್ನ – ಸಕಾಲಕ್ಕೆ ಎಚ್ಚರಿಸಿದ ಸೈನ್ ಇನ್ ಸೆಕ್ಯೂರಿಟಿ
ಕುಂದಾಪುರ: ಶ್ರೀ ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರ ಸಂಘದ ದರೋಡೆಗೆ ಕಾರಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ವಿಫಲ ಯತ್ನ ನಡೆಸಿದ್ದು, ಸಹಕಾರಿ ಸಂಘದ ಕಟ್ಟಡದ ಸಿಸಿಟಿವಿ ಉಸ್ತುವಾರಿ ವಹಿಸಿದ್ದ ಸೈನ್ ಇನ್ ಸೆಕ್ಯೂರಿಟಿ ತಕ್ಷಣ ಎಚ್ಚರಿಸಿದ ಪರಿಣಾಮ ದರೋಡೆ ಯತ್ನ ವಿಫಲವಾಗಿದೆ.

ಶಾಖೆಯ ಭದ್ರತೆಗಾಗಿ ಸೈನ್ ಇನ್ ಸೆಕ್ಯೂರಿಟಿ ವತಿಯಿಂದ ಸಿಸಿಟಿವಿ ಕೆಮೆರಾ ಅಳವಡಿಸಲಾಗಿತ್ತು. ಶನಿವಾರ ಬೆಳಗ್ಗಿನ ಜಾವ 2.45ರ ಸಮಯಕ್ಕೆ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಡಿಜಿಟಲ್ ಕಣ್ಗಾವಲು ತಂಡವು ಸಂಘದ ಶಾಖಾಧಿಕಾರಿ ನಾಗೇಂದ್ರ ಅವರಿಗೆ ಕರೆ ಮಾಡಿ ಯಾರೋ ಇಬ್ಬರು ವ್ಯಕ್ತಿಗಳು ಕಳ್ಳತನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಶಾಖಾಧಿಕಾರಿ ನಾಗೇಂದ್ರ ಹಾಗೂ ಅಧ್ಯಕ್ಷ ಚಂದ್ರಶೇಖರ್ ಅವರು ಸ್ಥಳಕ್ಕೆ ಹೋಗಿದ್ದಾರೆ. ಈ ಸಂದರ್ಭ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಕಳ್ಳರು ಶಾಖೆಯ ಕಿಟಕಿಯ ಸರಳನ್ನು ಯಾವುದೋ ಹರಿತವಾದ ಆಯುಧದಿಂದ ತುಂಡು ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿದ್ದರು.
