ಭವಿಷ್ಯದಲ್ಲಿ ಮೆರೈನ್ ತಂತ್ರಜ್ಞಾನಕ್ಕೆ ಆದ್ಯತೆ ದೊರೆಯಲಿದೆ – ಕ್ಯಾಪ್ಟನ್ ಮಧುಸೂಧನ್ ಹೆಗ್ಡೆ
ಜ್ಞಾನಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಮರೈನ್ ಇಂಜಿನಿಯರಿಂಗ್ ಬಗ್ಗೆ ಮಾಹಿತಿ ಶಿಬಿರ
ಸಿದ್ಧಾಪುರ: ಇತ್ತೀಚಿನ ದಿನಗಳಲ್ಲಿ ಮೆರೈನ್ ಇಂಜಿನಿಯರಿಂಗ್ ತಂತ್ರಜ್ಞಾನಗಳಿಗೆ ಅದ್ಭುತ ಭವಿಷ್ಯವಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕ್ಯಾಪ್ಟನ್ ಮಧುಸೂದನ್ ಹೆಗ್ಡೆ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಜ್ಞಾನಸರಸ್ವತಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಳ್ಳಲಾದ ಮರೈನ್ ಇಂಜಿನಿಯರಿಂಗ್ ಬಗ್ಗೆ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭ ಅವರು, ಐಎಂಯು ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರ್ಲಕ್ಷ್ಯ ಮಾಡದೇ ನಿರಂತರ ಅಧ್ಯಯನ ಮಾಡಬೇಕು ಎಂದರು. ಅಲ್ಲದೇ ಪದವಿ ಕೋರ್ಸ್ ಗಳ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಆ ಪರೀಕ್ಷೆಗಳ ತಯಾರಿ, ಕಾಲೇಜುಗಳ ಆಯ್ಕೆ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಸುಮುಖ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ, ಉಪಪ್ರಾಂಶುಪಾಲ ಹರ್ಷ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರಾವ್ಯ ನಿರೂಪಿಸಿ, ವಂದಿಸಿದರು.
