ತೂಗುಸೇತುವೆ ನಿರ್ಮಾತೃ ಪದ್ಮಶ್ರೀ ಡಾ. ಗಿರೀಶ್ ಭಾರಧ್ವಾಜ್ ವಿಧಿವಶ
ಸುಳ್ಯ: ಗ್ರಾಮೀಣ ಭಾಗಗಳ ತೂಗುಸೇತುವೆಗಳ ನಿರ್ಮಾತೃ ಎಂದೇ ಪ್ರಸಿದ್ಧರಾಗಿದ್ದ ಡಾ. ಗಿರೀಶ್ ಭಾರಧ್ವಾಜ್ (76) ಅವರು ಮಂಗಳವಾರ (ಇಂದು) ಮುಂಜಾನೆಅಲ್ಪ ಕಾಲದ ಅನಾರೋಗ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.

ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ಸುಳ್ಯದ ಪ್ರಸಿದ್ಧ ಸಮಾಜಸೇವಕರು. ಅವರು ದೇಶಾದ್ಯಂತ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ಪ್ರಸಿದ್ಧರಾಗಿದ್ದರು.
ಮೇ 2, 1950ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅರಂಬೂರಿನಲ್ಲಿ ಜನಿಸಿದರು. ಭಾರಧ್ವಾಜ್, ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಸುಳ್ಯದಲ್ಲಿ ಕೃಷಿ ಯಂತ್ರೋಪಕರಣಗಳನ್ನು ರಿಪೇರಿ ಮಾಡುವ ‘ಆಯಶ್ಯಿಲ್ಪ ಇಂಜಿನಿಯರಿಂಗ್ ವರ್ಕ್ಸ್’ ಎಂಬ ಸಣ್ಣ ಕಾರ್ಯಾಗಾರವನ್ನು (ವರ್ಕ್‌ಶಾಪ್) ಆರಂಭಿಸಿದರು.
ಸೇತುವೆಗಳ ಸರದಾರ: ಅರಂಬೂರು ಗ್ರಾಮದ ಪಯಸ್ವಿನಿ ನದಿಗೆ ದಾಟಲು ಸೇತುವೆ ಇಲ್ಲದೆ ಹಳ್ಳಿಗರು ಪಡುತ್ತಿದ್ದ ಕಷ್ಟವನ್ನು ಕಂಡು, ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರೂ ಸ್ವಪ್ರಯತ್ನದಿಂದ ತೂಗುಸೇತುವೆಯ ವಿನ್ಯಾಸ ರೂಪಿಸಿದರು. ಕೇವಲ 2 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಸ್ಥರ ಶ್ರಮದಾನದೊಂದಿಗೆ ತಮ್ಮ ಮೊದಲ ತೂಗುಸೇತುವೆ ನಿರ್ಮಿಸಿದರು. ಇವರ ತಾಂತ್ರಿಕ ನೈಪುಣ್ಯತೆಯನ್ನು ಗುರುತಿಸಿದ ಸರ್ಕಾರಗಳು ಇವರ ನೆರವು ಕೋರಿದವು.
ಬಳಿಕ ಇವರು ಕರ್ನಾಟಕದಲ್ಲಿ (ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಇತ್ಯಾದಿ) 90ಕ್ಕೂ ಹೆಚ್ಚು, ಕೇರಳದಲ್ಲಿ 30ಕ್ಕೂ ಹೆಚ್ಚು ಹಾಗೂ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳಲ್ಲಿ ತಲಾ ಎರಡು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ.
ಕಡಿಮೆ ವೆಚ್ಚ, ಕನಿಷ್ಠ ಸಮಯ: ಇವರು ನಿರ್ಮಿಸುತ್ತಿದ್ದ ತೂಗುಸೇತುವೆಗಳು ಸಾಂಪ್ರದಾಯಿಕ ಕಾಂಕ್ರೀಟ್ ಸೇತುವೆಗಳ 1/10ರಷ್ಟು ಕಡಿಮೆ ವೆಚ್ಚದಲ್ಲಿ ಕೇವಲ 3 ತಿಂಗಳ ಅವಧಿಯಲ್ಲಿ ಸಿದ್ಧವಾಗುತ್ತಿದ್ದವು. ಇವರ 100ನೇ ತೂಗುಸೇತುವೆಯು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ನಿರ್ಮಾಣವಾಗಿತ್ತು. ಇವರು ನಿರ್ಮಿಸಿದ ಅತ್ಯಂತ ಉದ್ದದ (290 ಮೀಟರ್)ತೂಗುಸೇತುವೆ ಬೆಳಗಾವಿ ಜಿಲ್ಲೆಯಲ್ಲಿದೆ.
ಪ್ರಶಸ್ತಿ ಮತ್ತು ಗೌರವಗಳು : ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಭಾರತ ಸರ್ಕಾರ ಇವರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಹಳ್ಳಿಗರು ಇವರನ್ನು ಪ್ರೀತಿಯಿಂದ ‘ಭಾರತದ ಬ್ರಿಡ್ಜ್ ಮ್ಯಾನ್’ (Bridge Man of India), ‘ಸೇತು ಬಂಧು’ ಮತ್ತು ‘ಸುಳ್ಯದ ವಿಶ್ವೇಶ್ವರಯ್ಯ’ ಎಂದು ಕರೆಯುತ್ತಿದ್ದರು.
