ಎಸ್. ಜಾನಕಿ ಭೇಟಿ ಈಗ ಮಧುರ ನೆನಪು; ಪ್ರಭಾ ಸ್ಟೂಡಿಯೋ ಕುಟುಂಬದ ಭಾವಪೂರ್ಣ ನುಡಿ
ಸಿದ್ದಾಪುರ (ಕುಂದಾಪುರ): ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನ ಸಂಗೀತಾಭಿಮಾನಿಗಳಿಗೆ ಅಪಾರ ನೋವುಂಟು ಮಾಡಿದೆ. ಅವರ ಅಗಲಿಕೆಯ ಬೆನ್ನಲ್ಲೇ, ಇತ್ತೀಚೆಗೆ ಕುಂದಾಪುರ ತಾಲೂಕಿನ ಸಿದ್ದಾಪುರದ ಪ್ರಭಾ ಸ್ಟೂಡಿಯೋಗೆ ನೀಡಿದ್ದ ಭೇಟಿ ಇದೀಗ ಅಲ್ಲಿನ ಕುಟುಂಬಕ್ಕೆ ಮರೆಯಲಾಗದ ಮಧುರ ನೆನಪಾಗಿ ಉಳಿದಿದೆ.

ಕಮಲಶೀಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಭಾ ಸ್ಟೂಡಿಯೋ ಮಾಲೀಕರಾದ ಪ್ರಶಾಂತ ಭಟ್ ಅವರ ಆಹ್ವಾನದ ಮೇರೆಗೆ ಎಸ್. ಜಾನಕಿ ಅವರು ಸ್ಟೂಡಿಯೋಗೆ ಆಗಮಿಸಿ ಕೆಲಕಾಲ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಪ್ರಶಾಂತ ಭಟ್ ಹಾಗೂ ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿ ಗೌರವ ಸಲ್ಲಿಸಿದ್ದರು.
ಸ್ಟೂಡಿಯೋದಲ್ಲಿ ಲಘು ಉಪಹಾರ ಸೇವಿಸಿದ ಎಸ್. ಜಾನಕಿ ಅವರು ಕುಟುಂಬ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಶುಭ ಹಾರೈಸಿದ್ದರು. ಅವರ ಸರಳತೆ, ವಿನಯಶೀಲತೆ ಹಾಗೂ ಎಲ್ಲರೊಂದಿಗೆ ಬೆರೆತು ಮಾತನಾಡಿದ ಆತ್ಮೀಯ ನಡೆ ಕುಟುಂಬದವರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ.
ಈ ಸಂದರ್ಭದಲ್ಲಿ ಪ್ರಶಾಂತ ಭಟ್, ಗಾಯತ್ರಿ ಭಟ್, ಸಚಿಂದ್ರ ಭಟ್, ಚಂದ್ರಕಾಂತ ಭಟ್ ಹಾಗೂ ಭಾರತಿ ಭಟ್ ಉಪಸ್ಥಿತರಿದ್ದರು.
ಎಸ್. ಜಾನಕಿ ಅವರ ಅಗಲಿಕೆಯ ನಂತರ, ಅವರೊಂದಿಗೆ ಕಳೆದ ಆ ಅಮೂಲ್ಯ ಕ್ಷಣಗಳನ್ನು ಸ್ಮರಿಸುತ್ತಿರುವ ಪ್ರಭಾ ಸ್ಟೂಡಿಯೋ ಕುಟುಂಬ, “ಗಾನಕೋಗಿಲೆ ನಮ್ಮ ಮನೆಗೆ ಆಗಮಿಸಿ ಆಶೀರ್ವದಿಸಿದ ಕ್ಷಣಗಳು ನಮ್ಮ ಜೀವನದ ಸುವರ್ಣ ನೆನಪು. ಅವರ ಸರಳ ವ್ಯಕ್ತಿತ್ವ ಮತ್ತು ಆತ್ಮೀಯತೆ ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಉಳಿಯಲಿದೆ” ಎಂದು ಭಾವಪೂರ್ಣವಾಗಿ ನುಡಿದಿದೆ.
