ಕೋಟೇಶ್ವರ: ಕಸದ ಬುಟ್ಟಿ ಸೇರಿದ ಕೋಟಿಲಿಂಗೇಶ್ವರ ದೇವಳದ ರಥಬೀದಿ ಒತ್ತುವರಿ ತೆರವಿನ ಹೈಕೋರ್ಟ್ ಆದೇಶ!
ರಿಕ್ಷಾ ನಿಲ್ದಾಣ ತೆರವಿಗೆ ಹೈಕೋರ್ಟ್ ಮೆಟ್ಟಿಲೇರಿದ ಒತ್ತುವರಿ ಆರೋಪಿ – ನ್ಯಾಯಕ್ಕಾಗಿ ರಿಕ್ಷಾ ಚಾಲಕರ ಆಗ್ರಹ
ಕುಂದಾಪುರ: ಇಪ್ಪತ್ತೊಂದು ವರ್ಷಗಳ ಹಿಂದೆಯೇ ದೇವಸ್ಥಾನದ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಉಚ್ಚ ನ್ಯಾಯಾಲಯವು ಒತ್ತುವರಿ ತೆರವಿಗೆ ಆದೇಶ ನೀಡಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಒತ್ತುವರಿ ತೆರವು ಮಾಡದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಲ್ಲದೇ ಒತ್ತುವರಿ ಆರೋಪಿಯ ಪರವಾಗಿ ನಿಂತು ಸುಳ್ಳು ದಾಖಲೆ ನಿರ್ಮಿಸಿ, ಸಮೀಪದಲ್ಲಿದ್ದ ಆಟೋ ರಿಕ್ಷಾ ನಿಲ್ದಾಣ ತೆರವಿಗೆ ಯತ್ನಿಸುತ್ತಿರುವ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರನ ರಥಬೀದಿಯಲ್ಲಿ ನಡೆಯುತ್ತಿದೆ.

ರಿಕ್ಷಾ ನಿಲ್ದಾಣದ ತೆರವಿಗೆ ಶತಾಯಗತಾಯ ಪ್ರಯತ್ನಿಸುತ್ತಿರುವ ರಥಬೀಧಿ ಬದಿಯ ಮನೆಯ ಮಾಲೀಕ, ಒತ್ತುವರಿ ಆರೋಪಿ ಈ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯದ ಮೊರೆಹೋಗಿದ್ದು, ಬಡ ರಿಕ್ಷಾ ಚಾಲಕರು ಕಂಗಾಲಾಗಿದ್ದಾರೆ. ಈಗಾಗಲೇ ಈ ಬಗ್ಗೆ ಹಲವು ಮನವಿಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆಟೋ ರಿಕ್ಷಾ ಚಾಲಕ ಮಾಲಕರ ಸಂಘಟನೆಗೂ ಮನವಿ ನೀಡಲಾಗಿದೆಯಾದರೂ ಯಾರೊಬ್ಬರೂ ಇವರ ಬೆಂಬಲಕ್ಕೆ ನಿಂತಿಲ್ಲದಿರುವುದು ಕಂಡು ಬಂದಿದೆ. ಆದರೆ ಬಿಲ್ಲವ ಸಂಘಟನೆಯ ಮುಖಂಡ ಅಶೋಕ ಪೂಜಾರಿ ಬೀಜಾಡಿ ಘಟನೆಯನ್ನು ಖಂಡಿಸಿದ್ದು, ಆಟೋ ಚಾಲಕರ ಪರ ನಿಂತಿದ್ದಾರೆ.

ವಿಶೇಷವೆಂದರೆ ಈ ರಿಕ್ಷಾ ನಿಲ್ದಾಣವನ್ನು 2003ರಲ್ಲಿ ಅಂದಿನ ಪೊಲೀಸ್ ಅಧಿಕಾರಿಗಳೇ ಉದ್ಘಾಟಿಸಿದ್ದರು. ಕಳೆದ ಮೂವತ್ತಮೂರು ವರ್ಷಗಳಿಂದ ಇದೇ ನಿಲ್ದಾಣದಲ್ಲಿ ಬಡ ಆಟೋ ಚಾಲಕರು ಕೋಟಿಲಿಂಗೇಶ್ವರನ ಸನ್ನಿಧಿಗೆ ಬರುವ ಭಕ್ತರಿಗೆ ಸೇವೆ ನೀಡುತ್ತಿದ್ದಾರೆ. ರಥಬೀದಿ, ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಗೆ ಈ ಆಟೋ ಚಾಲಕರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆದರೆ ಇಂದು ಅದೇ ಆಟೋ ಚಾಲಕರ ಸ್ಥಿತಿ ಅತಂತ್ರವಾಗಿದ್ದು, ಅಧಿಕಾರಿಗಳು ಹಾಗೂ ಸಾರ್ವಜನಿಕರು, ಆಟೋ ಚಾಲಕರ ಸಂಘಟನೆಗಳು, ಜನಪ್ರತಿನಿಧಿಗಳು ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಜೊತೆಗೆ 2005ರಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು ನೀಡಿದ ಒತ್ತುವರಿ ತೆರವು ಆದೇಶವನ್ನು ಅಧಿಕಾರಿಗಳು ಪಾಲಿಸುವ ಮೂಲಕ ದೇವಸ್ಥಾನದ ಭೂಮಿಯನ್ನು ತೆರವುಮಾಡಿಕೊಡಬೇಕಿದೆ.
