ಸ್ನೇಹ ಬೆಳೆಸಿ ಲಕ್ಷಾಂತರ ವಂಚನೆ : ದೂರು ದಾಖಲು
ಕುಂದಾಪುರ: ಹರ್ಬಲ್ ಲೈಫ್ ನ್ಯೂಟ್ರಿಶನ್ ಎಂಬ ಕಂಪೆನಿಯ ವಸ್ತುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಕೃಷಿ ಕೆಲಸಕ್ಕೆ ಹಣದ ಸಹಾಯ ಬೇಡಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೀಜಾಡಿ ಗ್ರಾಮದ ತೆರೆಸಾ ಮೆಂಡೊನ್ಸಾ (60) ಎಂಬಾತ ವಂಚನೆಗೊಳಗಾದವರು. ಬಿದ್ಕಲ್ ಕಟ್ಟೆಯ ನಿವಾಸಿ ಸಂತೋಷ್ (50) ಮೋಸ ಮಾಡಿದ ಆರೋಪಿ. ತೆರೆಸಾ ಮೆಂಡೋನ್ಸಾ ಅವರು ಹರ್ಬಲ್ ಲೈಫ್ ನ್ಯೂಟ್ರಿಶನ್ ಎಂಬ ಕಂಪೆನಿಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಆರೋಪಿ ಸಂತೋಷನ ಪರಿಚಯವಾಗಿದೆ. 3 ವರ್ಷಗಳ ಹಿಂದೆ ಆರೋಪಿ ಸಂತೋಷ್ ದೂರುದಾರ ತೆರೆಸಾ ಬಳಿ ಕೃಷಿ ತೋಟದ ಖರ್ಚಿಗಾಗಿ ಹಣ ನೀಡಿದರೆ ನಿಮಗೆ ಹೆಚ್ಚುವರಿ ಹಣವನ್ನು ಸೇರಿಸಿ ಬೆಳೆದ ಬೆಳೆ ಮಾರಾಟವಾದ ನಂತರ ನೀಡುವುದಾಗಿ ನಂಬಿಸಿ ತಲಾ ಐದು ಸಾವಿರ, ಹತ್ತು ಸಾವಿರ, ಐವತ್ತು ಸಾವಿರ, ತೊಂಭತ್ತು ಸಾವಿರ ಹೀಗೇ ಒಟ್ಟು ನಾಲ್ಕೂವರೆ ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ತೆರೆಸಾ ಅವರ ಬಳಿ ಇದ್ದ ಚಿನ್ನದ ಚೈನ್ನ್ನು ಕೂಡಾ ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಅಡವಿಟ್ಟು ಅದರಿಂದಲೂ ಕೂಡ ಹಣವನ್ನು ಪಡೆದುಕೊಂಡಿದ್ದು, ಮೂರು ತಿಂಗಳ ಹಿಂದೆ ಚಿನ್ನದ ಮೇಲಿನ ಸಾಲದ ಬಡ್ಡಿಯನ್ನು ಕಟ್ಟಲು ಹಣದ ಅಗತ್ಯವಿದ್ದು, ಸ್ವಲ್ಪ ಹಣವನ್ನಾದರೂ ನೀಡಿ ಎಂದು ಕೇಳಿಕೊಂಡಾಗ. ತನ್ನ ಬಳಿ ಹಣವಿಲ್ಲವೆಂದು ಹೇಳಿ ಮೊಬೈಲ್ ಸಂಖ್ಯೆಯನ್ನು ಕೂಡ ಬ್ಲಾಕ್ ಮಾಡಿ ಮೋಸ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.