BlogEconomyGovernmentHealthHelpHighlightsHuman storiesLifestyleLocal newsOthersSuccess storiesTechTop StoriesTrending

ಕುಂದಾಪುರ: ತಾಲೂಕು ಆಸ್ಪತ್ರೆಗೆ ಕ್ಯಾಂಪ್ಕೋ ಸಂಸ್ಥೆಯಿಂದ 29 ಲಕ್ಷ ಮೌಲ್ಯದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಕೊಡುಗೆ

Aware others:

ಕುಂದಾಪುರ: ಐದು ವರ್ಷ ಕ್ಯಾಂಪ್ಕೋ ಅಧ್ಯಕ್ಷನಾಗಿ ಸಮಾಜದ ಸಮಸ್ಯೆಗಳ ಜೊತೆಗೆ ಸ್ಪಂದಿಸಿದ್ದೇನೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಶಾಸಕರ ಮೂಲಕ ಸ್ಕ್ಯಾನಿಂಗ್ ಯಂತ್ರದ ಬೇಡಿಕೆ ಬಂದಾಗ ಕುಂದಾಪುರದವನಾಗಿ ಅದಕ್ಕಾಗಿ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿದಾಗ ಎಲ್ಲ ನಿರ್ದೇಶಕರು ಒಮ್ಮತದಿಂದ ನೀಡಲು ಒಪ್ಪಿದ್ದಾರೆ. ಈ ಸ್ಕ್ಯಾನಿಂಗ್ ಯಂತ್ರದ ಉಪಯೋಗ ಬಡಜನರಿಗೆ ಆಗಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಅವರು ಸೋಮವಾರ ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ವತಿಯಿಂದ ಆಸ್ಪತ್ರೆಗೆ 29 ಲಕ್ಷ ರೂ.ಗಳ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.

ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ. ಚಂದ್ರ ಮರಕಾಲ ಮಾತನಾಡಿ, ಎಲ್ಲ ತಜ್ಞ ವೈದ್ಯರಿಗೆ ಈ ಯಂತ್ರದ ಅನುಕೂಲ ಆಗಲಿದೆ. 7 ತಿಂಗಳಿಂದ ಇಲ್ಲಿ ರೇಡಿಯಾಲಜಿಸ್ಟ್ ವೈದ್ಯರಿದ್ದು ಅವರ ಮೂಲಕ ಇನ್ನಷ್ಟು ಜನರಿಗೆ ಈ ಯಂತ್ರದ ಸೇವೆ ದೊರೆಯಲಿದೆ. ಈವರೆಗೆ ಖಾಸಗಿ ಸಂಸ್ಥೆ ಜತೆಗೆ ಒಪ್ಪಂದ ಮೂಲಕ ಹಣ ಪಾವತಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಯಂತ್ರ ಆಧುನಿಕ ತಂತ್ರಜ್ಞಾನದ್ದಾಗಿದ್ದು ರೋಗ ಪತ್ತೆಗೆ ಅನುಕೂಲ ಆಗಲಿದೆ ಎಂದರು. ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಸ್ಕ್ಯಾನರ್ ನ್ನು ಉದ್ಘಾಟಿಸಿದರು. ಬಳಿಕ ತಮ್ಮ ಬೇಡಿಕೆಗೆ ಸ್ಪಂದಿಸಿ ಆಲ್ಟ್ರಾ ಸೌಂಡ್ ಸ್ಕ್ಯಾನರ್ ಯಂತ್ರ ನೀಡಿದ ಕ್ಯಾಂಪ್ಕೋದ ಎಲ್ಲ ನಿರ್ದೇಶಕರನ್ನು ತಮ್ಮ ವತಿಯಿಂದ ಗೌರವಿಸಿದರು.

ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಸಂತೋಷ್ ಕುಮಾರ್ ಶೆಟ್ಟಿ, ಅಶೋಕ್ ಸುವರ್ಣ, ತಹಶೀಲ್ದಾರ್ ಪ್ರದೀಪ ಕುರ್ಡೇಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಕೆ., ಫಿಸಿಶಿಯನ್ ಡಾ. ನಾಗೇಶ್, ನಿವೃತ್ತ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ಎಂಡಿ ಡಾ. ಬಿ.ವಿ. ಸತ್ಯನಾರಾಯಣ, ಜನರಲ್ ಮೆನೆಜರ್ ರೇಷ್ಮಾ ಮಲ್ಯ ಹಾಗೂ ಕ್ಯಾಂಪ್ಕೋ ನಿರ್ದೇಶಕರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!