ಕುಂದಾಪುರ: ಅಮಾಸೆಬೈಲಿನಲ್ಲಿ ಕೊಡ್ಗಿ ನೆನಪು, ಸನ್ಮಾನ ಚೆಕ್ ವಿತರಣೆ

ಕುಂದಾಪುರ: ದಿವಂಗತ ಎ.ಜಿ. ಕೊಡ್ಗಿಯವರ ಗ್ರಾಮೀಣ ಅಭಿವೃದ್ಧಿಯ ಚಿಂತನೆ ವಿಶಿಷ್ಟವಾದದ್ದು. ತಮ್ಮ ಚಿಂತನೆಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನದೊಂದಿಗೆ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ. ಅವರು ಹಾಕಿಕೊಟ್ಟ ದಾರಿ ನಮಗೆ ಆದರ್ಶವಾಗಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ.), ಅಮಾಸೆಬೈಲು, ಕರ್ಣಾಟಕ ಬ್ಯಾಂಕ್ (ಲಿ.) ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಧರ್ಮಸ್ಥಳ, ಗ್ರಾಮ ಪಂಚಾಯತ್, ಅಮಾಸೆಬೈಲು, ವ್ಯವಸಾಯ ಸೇವಾ ಸಹಕಾರಿ ಸಂಘ ನಿ, ಅಮಾಸೆಬೈಲು ಹಾಗೂ ಬಿ. ವಿ. ಜಿ. ಕೊಡ್ಲಿ ಅಭಿಮಾನಿ ಬಳಗ ಇವರ ಸಹಯೋಗದಲ್ಲಿ, ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕೊಡ್ಲಿ ನೆನಪು ಮತ್ತು ಉತ್ತಮ ಗ್ರಾಮ ಪಂಚಾಯತ್ ಗೆ ಸನ್ಮಾನ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,,ಶಾಲಾ ಬಸ್ಸು ನಿರ್ವಹಣೆ ಬಗ್ಗೆ ಚೆಕ್ ವಿತರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕೊಡ್ಗಿಯವರ ಜ್ಞಾನಗಳೆಲ್ಲವೂ ಅನುಭವಾಧಾರಿತವಾಗಿದ್ದವು. ಅದಕ್ಕೆ ಪ್ರಾಯೋಗಿಕತೆಯ ಸ್ಪರ್ಶವಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯವಾದ ಚಿಂತನೆಗಳನ್ನು ಎ.ಜಿ.ಕೊಡ್ಗಿ ಹೊಂದಿದ್ದರು ಎಂದರು.
ಇದೇ ಸಂದರ್ಭದಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡ ಮಾಡುವ ವರ್ಷದ ಪ್ರಶಸ್ತಿಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಪಡೆದುಕೊಂಡಿತು. ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಪ್ರಶಸ್ತಿ ಸ್ವೀಕರಿಸಿದರು.
ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್ ನ ಹಿರಿಯ ಅಧಿಕಾರಿ ವಾದಿರಾಜ್ ಭಟ್ ಅಧ್ಯಕ್ಷತೆವಹಿಸಿದ್ದರು. ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಕರ್ಣಾಟಕ ಬ್ಯಾಂಕ್ (ಲಿ) ಮಂಗಳೂರು ಇದರ ಎಂ ಡಿ ಮತ್ತು ಸಿ.ಇ.ಒ, ರಾಘವೇಂದ್ರ ಎಸ್ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್, ಪತ್ರಕರ್ತ ಕೆ.ಸಿ ರಾಜೇಶ್, ಅಮಾಸೆಬೈಲು ಗ್ರಾಂ.ಪಂ. ಅಧ್ಯಕ್ಷೆ ಮಲ್ಲಿಕಾ ಕುಲಾಲ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಸದಾನಂದ ಶೆಟ್ಟಿ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲು ಇದರ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಕೇಶ್ ಭಂಡಾರಿ, ಹಾಗೂ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಕೊಡ್ಗಿ ಸ್ವಾಗತಿಸಿದರು. ಶ್ರೀಕಾಂತ್ ಸಿದ್ದಾಪುರ ನಿರ್ವಹಿಸಿದರು.