ಕೋಡಿಬೇಂಗ್ರೆಯಲ್ಲಿ ಮೂವರ ಪ್ರಾಣ ತೆಗೆದ ಇಲ್ಲೀಗಲ್ ಬೋಟಿಂಗ್ – ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬ್ರಹ್ಮಾವರ: ಜನವರಿ 26ರಂದು ಬೆಳಿಗ್ಗೆ ಬ್ರಹ್ಮಾವರ ತಾಲೂಕು ಕೋಡಿ ಕನ್ಯಾನ ಗ್ರಾಮದ ಕೋಡಿಬೇಂಗ್ರೆ ಅಳಿವೆಬಾಗಿಲು ಎಂಬಲ್ಲಿ ಸ್ವರ್ಣಾನದಿಯಲ್ಲಿ ಬೆಳಿಗ್ಗೆ ನಡೆದ ಬೋಟಿಂಗ್ ದುರಂತದಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮವಾಗಿ ಬೋಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಬ್ರಹ್ಮಾವರ ತಾಲೂಕು ಕೋಡಿ ಗ್ರಾಮ ಕೋಡಿಬೇಂಗ್ರೆಯ ನಿವಾಸಿಗಳಾದ ಶಶಿಧರ್ ಶ್ರೀಯಾನ್ ಮಗ ಸುಹಾಸ್ ಶ್ರೀಯಾನ್(23), ದಿ.ಸುಭಾನ್ ಕೋಡಿಬೇಂಗ್ರೆ ಮಗ ಸುಫಿಯಾನ್(20) ಹಾಗೂ ದಿ. ಗುರುವ ಕುಂದರ್ ಮಗ ವಾಸು ಮೆಂಡನ್(52) ಆರೋಪಿಗಳು.



ಮೈಸೂರು ಮೂಲದ ಜಿ ಗುರುಪ್ರಸಾದ್(34) ನೀಡಿದ ದೂರಿನಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಬೋಟ್ ವಿಹಾರಕ್ಕೆ ಆರೋಪಿಗಳು ಪ್ರಸಾಸೋಧ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವುದು ತಿಳಿದುಬಂದಿದೆ. ಅಲ್ಲದೇ ಈ ಘಟನೆಗೆ ಕಾರಣವಾದ ಬೋಟ್ ಗೆ ಯಾವುದೇ ಸುರಕ್ಷತಾ ದೃಢೀಕರಣ ಪ್ರಮಾಣಪತ್ರವನ್ನು ಪ್ರವಾಸೋಧ್ಯಮ ಇಲಾಖೆಯಿಂದ ಪಡೆದಿಲ್ಲ. ಅಲ್ಲದೇ ಬೋಟ್ ಪ್ರವಾಸೋಧ್ಯಮದಲ್ಲಿ ಪ್ರವಾಸಿಗರ ವಿಹಾರಕ್ಕೆ ಸೂಕ್ತವಾಗಿರುವ ಬೋಟ್ ಕೂಡ ಅಲ್ಲವೆಂದು ತನಿಖೆಯಿಂದ ತಿಳಿದುಬಂದಿದೆ. ಲೈಫ್ ಜಾಕೆಟ್ನಂತಹ ಯಾವುದೇ ಮಂಜಾಗ್ರತಾ ಕ್ರಮಗಳನ್ನು ಅನುಸರಿಸಿಲ್ಲದಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಒಟ್ಟು 29 ಜನರನ್ನು ಆರೋಪಿ ಸುಹಾಸ್ ಎಂಬಾತ 1 ಬೋಟ್ ನಲ್ಲಿ 14 ಹಾಗೂ ಇನ್ನೊಂದು ಬೋಟ್ ನಲ್ಲಿ 15 ಜನರಂತೆ 2 ಪ್ರತ್ಯೇಕ ಬೋಟ್ ನಲ್ಲಿ ದೋಣಿ ವಿಹಾರಕ್ಕೆ ಕಳುಹಿಸಿದ್ದು, 11:15 ಗಂಟೆಗೆ THE WAVE RIDER ಎಂಬ ಹೆಸರಿನ ಬೋಟ್ ನ್ನು ಅದರ ಚಾಲಕ ಸೂಫಿಯಾನ ಮತ್ತು ವಾಸು ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಓಮ್ಮೆಲೆ ಎಡ ಬದಿಗೆ ತಿರುಗಿಸಿ ಚಲಾಯಿಸಿದ್ದರಿಂದ ಬೋಟ್ ಮಗುಚಿ ಬಿದ್ದು, ಬೋಟ್ ನಲ್ಲಿದ್ದ ಎಲ್ಲಾ 14 ಜನ ನೀರಿಗೆ ಬಿದ್ದು, ಅವರಲ್ಲಿ ಶಂಕರಪ್ಪ(27), ಕುಮಾರಿ ಸಿಂಧು.ಪಿ(23) ಮತ್ತು ಕುಮಾರಿ ದಿಶಾ(26) ಇವರು ನೀರಿನಲ್ಲಿ ಮುಳುಗಿ ಮೃತರಾಗಿ, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಮೂರೂ ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
