ಹೊಟೇಲ್‌ಗೆ ರೇಟಿಂಗ್ ಟಾಸ್ಕ್ ನೀಡುವಂತೆ ಹೇಳಿ ಬಿಜೂರು ಅರ್ಚಕರಿಗೆ 6.16 ಲಕ್ಷ ರೂ. ವಂಚನೆ – ದೂರು ದಾಖಲು
ಕುಂದಾಪುರ: ಹೊಟೇಲ್‌ಗೆ ರೇಟಿಂಗ್ ಕೊಟ್ಟು ಹಣ ಗಳಿಸಿ ಎಂಬ ಸಂದೇಶವನ್ನು ನಂಬಿ ಲಿಂಕ್ ತೆರೆದ ಬಿಜೂರಿನ ಅರ್ಚಕರೊಬ್ಬರು 6.16 ಲಕ್ಷ ರೂ. ಕಳೆದುಕೊಂಡಿದ್ದಾರೆ. ಬೈಂದೂರು ತಾಲೂಕಿನ ಬಿಜೂರು ಕಿರಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಗುರುಮೂರ್ತಿ ಜಿ. ಹೆಗಡೆ ಅವರು ಆನ್‌ಲೈನ್ ವಂಚನೆಗೆ ಒಳಗಾದವರು.

ಗುರುಮೂರ್ತಿಯವರ ಮೊಬೈಲ್‌ಗೆ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಎಂಬ ಲಿಂಕ್ ಬಂದಿತ್ತು. ಅದನ್ನು ಕುತೂಹಲದಿಂದ ತೆರೆದಾಗ ಅದರಲ್ಲಿ ಹೊಟೇಲ್‌ಗೆ ರೇಟಿಂಗ್ ಕೊಟ್ಟು ಹಣ ಗಳಿಸಬಹುದು ಎಂದು ಅಪರಿಚಿತರು ತಿಳಿಸಿದರು. ಅದರಂತೆ ಅರ್ಚಕರು ಪತ್ನಿಯ ಬ್ಯಾಂಕ್ ಖಾತೆಯಿಂದ 1,44,000 ರೂ. ಗಳನ್ನು ಕಳಿಸಿದ್ದರು. ಟಾಸ್ಕ್ ಪಾಯಿಂಟ್ ಶೇ. 90ರಷ್ಟು ಆಗಿದ್ದು ಶೇ. 100ರಷ್ಟು ಪಾಯಿಂಟ್ ಮಾಡಿದರೆ ಮಾತ್ರ ಹಾಕಿದ ಹಣ ಮರುಪಾವತಿ ಆಗುತ್ತದೆ ಎಂದು ಮತ್ತೆ ವಂಚಕರು ತಿಳಿಸಿದ್ದಾರೆ. ಅದರಂತೆ ಅರ್ಚಕರು ರಮೇಶ ಎಂಬವರ ಖಾತೆಯಿಂದ ಸೆಪ್ಟಂಬರ್ 2ರಂದು 2,72,700 ರೂ. ಕಳುಹಿಸಿದ್ದಾರೆ. ಬಳಿಕ ನಿಮ್ಮಅಕೌಂಟ್ ಫ್ರೀಜ್ ಆಗಿದ್ದು, ಇನ್ನಷ್ಟು ಹಣ ಹಾಕಿದರೆ ಮಾತ್ರ ಅನ್‌ಫ್ರೀಜ್ ಆಗುತ್ತದೆ ಎಂದು ಹೆದರಿಸಿದ್ದಾರೆ. ಹೋದ ಹಣ ಮತ್ತೆ ಪಡೆದುಕೊಳ್ಳುವ ಉದ್ದೇಶದಿಂದ ಗುರುಮೂರ್ತಿಯವರು ಕ್ರಮವಾಗಿ 1,45,000 ರೂ. ಮತ್ತು 55,000 ರೂ. ಕಳುಹಿಸಿದ್ದರು. ಆದರೆ ಅಪರಿಚಿತ ಆರೋಪಿಗಳು ಮತ್ತೆ ಮತ್ತೆ ಹಣ ಹಾಕುವಂತೆ ತಿಳಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದ್ದು ಅಷ್ಟರಲ್ಲಿ ಒಟ್ಟು 6,16,700 ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.