ಕುಂದಾಪುರ: ಶಿಕ್ಷಣ, ಸಂಘಟನೆಯಲ್ಲಿ ನಂಬಿಕೆ ಇಟ್ಟವರು ನಾರಾಯಣ ಗುರುಗಳು – ಅಶೋಕ್ ಪೂಜಾರಿ
ಕುಂದಾಪುರ ತಾಲೂಕು ಆಡಳಿತದಿಂದ ನಾರಾಯಣ ಗುರು ಜಯಂತಿ ಉದ್ಘಾಟಿಸಿದ ಅಶೋಕ ಪೂಜಾರಿ ಬೀಜಾಡಿ
ಕುಂದಾಪುರ: ಮೂಢನಂಬಿಕೆ, ಅಸ್ಪೃಶ್ಯತೆ, ಅಜ್ಞಾನ, ಜಮೀನ್ದಾರಿ ಪದ್ಧತಿಯ ಕ್ರೌರ್ಯ, ಬ್ರಿಟಿಷರ ಆಡಳಿತ ತುಂಬಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳು ಅವೆಲ್ಲದರ ವಿರುದ್ಧ ಹೋರಾಡಿದರು. ಜಾತಿ ತಾರತಮ್ಯ ವಿರೋಧಿಸಿ, ವಿದ್ಯೆ ಹಾಗೂ ಸಂಘಟನೆಯಿಂದ ಸಮಾಜ ಬಲಯುತವಾಗುತ್ತದೆ ಎಂದು ನಂಬಿದ್ದರು ಎಂದು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದರು.



ರವಿವಾರ ಕುಂದಾಪುರ ತಾಲೂಕು ಪಂಚಾಯತ್, ತಾಲೂಕು ಆಡಳಿತ ಕುಂದಾಪುರ ವತಿಯಿಂದ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕರ ಅನುದಾನದಲ್ಲಿ ನಾರಾಯಣ ಗುರುಗಳ ಮಂದಿರಗಳಿಗೆ ಅನುದಾನ ಮೀಸಲಿಡುವಂತೆ ಮನವಿ ಮಾಡಿದರು.



ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಅಧ್ಯಕ್ಷತೆ ವಹಿಸಿ, ಸಮಾಜಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು ಶ್ರೀ ನಾರಾಯಣ ಗುರುಗಳು. ಕೇರಳ ಸಮಾಜದಲ್ಲಿನ ಅಸ್ಪೃಶ್ಯತೆ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ ಉಪಾಯಗಳನ್ನು ಕಂಡುಕೊಂಡರು. ಜಗತ್ತಿನಲ್ಲಿರುವುದು ಒಂದೇ ಜಾತಿ ಒಂದೇ ಮತ ಹಾಗೂ ಒಂದೇ ದೇವರು ಎಂಬ ತತ್ವವನ್ನು ಪ್ರತಿಪಾದಿಸಿದರು. ಕೇರಳದಲ್ಲಿ ಅತಿ ಹೆಚ್ಚು ಸಾಮಾಜಿಕ ಬದಲಾವಣೆಗಳನ್ನು ಮಾಡಿರುವ ವ್ಯಕ್ತಿ ಅವರು ಎಂದರು.


ಹೆಮ್ಮಾಡಿ ಜನತಾ ಪೂರ್ವ ಕಾಲೇಜ್ ನ ಕನ್ನಡ ಉಪನ್ಯಾಸಕ ನಾಗರಾಜ್ ಅಲ್ವಾರು ಉಪನ್ಯಾಸ ನೀಡಿ, ಗುರುಗಳು ವ್ಯಕ್ತಿಯಲ್ಲ ಶಕ್ತಿ. ಒಂದು ಜನಾಂಗ ಹಾಳಾಗಲು ಹೊರಗಿನವರು ಬೇಕಿಲ್ಲ ಒಳಗಿನವರೇ ಸಾಕು. ಹಾಗಾಗಿ ಗುರುಗಳು ಸಂಘಟನೆಯಲ್ಲಿ ಬಲವಿದೆ ಎಂದಿದ್ದರು. ನಾರಾಯಣ ಗುರುಗಳು ವಿಶ್ವ ಮಾನವ ಗುರು ಎಂದರು.


ಕುಂದಾಪುರ ಪುರಸಭೆಯ ಅಧ್ಯಕ್ಷ ಮೋಹನ್ ದಾಸ್ ಶೆಣೈ ಉದ್ಘಾಟಿಸಿದರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ, ಕುಂದಾಪುರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹುಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಉಪಸ್ಥಿತರಿದ್ದರು. ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಉಪತಹಶಿಲ್ದಾರ್ ವಿನಯ್ ವಂದಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರ್ವಹಿಸಿದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ