ಅಮಾಸೆಬೈಲು ಅತ್ಯಾಚಾರ ಯತ್ನ ಪ್ರಕರಣ : ಶಾಸಕ ಕಿರಣ್ ಕೊಡ್ಗಿ ಸ್ಪಷ್ಟನೆ

ಕುಂದಾಪುರ: ಇತ್ತೀಚೆಗೆ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪದ ರಟ್ಟಾಡಿಯಲ್ಲಿ ನಡೆದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಕುಂದಾಪುರದ ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ವಾಸ್ತವ ಡಾಟ್ ಕಾಮ್ ಜೊತೆಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿ ಸಂತ್ರಸ್ಥ ಮಹಿಳೆಯ ಮನೆಯವರು ಶಾಸಕನಾಗಿರುವ ನೆಲೆಯಲ್ಲಿ ನನ್ನ ಬಳಿ ಬಂದಿದ್ದರು. ಆದರೆ ನಾನು ಯಾವುದೇ ರೀತಿಯ ರಾಜಿ ಪಂಚಾಯಿತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಜೀವನದಲ್ಲಿ ನಾನು ನನ್ನ ತಂದೆಯ ಹಾದಿಯಲ್ಲಿ ನಡೆದು ಬಂದಿದ್ದೇನೆ. ನನ್ನ ತಂದೆಯಷ್ಟು ನಾನು ನಿಷ್ಟುರವಾದಿಯಲ್ಲದಿದ್ದರೂ ತಪ್ಪು ಯಾರೇ ಮಾಡಿದರೂ ಅದನ್ನು ಮುಚ್ಚಿಡುವುದಾಗಲೀ ಬೆಂಬಲಿಸುವುದಾಗಲೀ ಮಾಡುವ ಪ್ರಶ್ನೆಯೇ ಇಲ್ಲ. ಸಂತ್ರಸ್ಥ ಮಹಿಳೆಯ ಮನೆಯವರು ನನ್ನ ಬಳಿ ಬಂದಾಗ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ನಿಮಗೆ ಅನ್ಯಾಯವಾದರೆ ಪೊಲೀಸ್ ದೂರು ನೀಡಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದಿದ್ದೇನೆ. ಈ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಏಳೆಂಟು ಸದಸ್ಯರೂ ಬಂದಿದ್ದು, ಅವರಿಗೂ ಅದನ್ನೇ ಹೇಳಿದ್ದೇನೆ. ನನ್ನೂರಿನ ಮಹಿಳೆಯರ ರಕ್ಷಣೆ ವಿಚಾರ ಬಂದಾಗ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.