ಅಮಾಸೆಬೈಲು: ಶಾಸಕರ ಊರಿನಲ್ಲಿ ಧರ್ಮಸ್ಥಳ ಸಂಘದ ಸದಸ್ಯೆ, ವಿವಾಹಿತ ಮಹಿಳೆಗೆ ಅತ್ಯಾಚಾರ ಯತ್ನ- ಮುರಿದು ಬಿದ್ದ ಶಾಸಕರ ಪಂಚಾತಿಕೆ?!, ಪ್ರಕರಣ ದಾಖಲು!
ಕುಂದಾಪುರ: ಕಳೆದ ಹನ್ನೆರಡು ವರ್ಷಗಳಿಂದ ನಡೆಯುತ್ತಿರುವ ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಮಟ್ಟದಲ್ಲಿ ಜೀವಂತವಾಗಿರುವಂತೆ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪದ ರಟ್ಟಾಡಿಯಲ್ಲಿ ಇದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಗುಲ್ಲೆಬ್ಬಿಸಿದೆ. ಅದೂ ಧರ್ಮಸ್ಥಳದ ಧರ್ಮ ಸಂರಕ್ಷಣಾ ಯಾತ್ರೆ ನೆಪದಲ್ಲಿ ಕರಪತ್ರ ನೀಡಲು ಹೋದಾಗ ನಡೆದ ಘಟನೆಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸದಸ್ಯೆಗೂ ರಕ್ಷಣೆ ಇಲ್ಲವೇ ಎನ್ನುವ ಆತಂಕ ಕರಾವಳಿಯಲ್ಲಿ ಮನೆ ಮಾಡಿದೆ.

ಕುಂದಾಪುರ ತಾಲೂಕು ಪಂಚಾಯತಿ ಮಾಜೀ ಸದಸ್ಯ, ಧರ್ಮಸ್ಥಳ ಯೋಜನೆ ವ್ಯಾಪ್ತಿಯಲ್ಲಿ ಬರುವ ಉಡುಪಿ ಜಿಲ್ಲಾ ಜನಜಾಗೃತಿ ಸಮಿತಿಯ ಮಾಜೀ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಎಂಬಾತನೇ ತಲೆಮರೆಸಿಕೊಂಡಿರುವ ಆರೋಪಿ. ಮೊನ್ನೆ ಧರ್ಮಸ್ಥಳ ಪರವಾಗಿ ಹಮ್ಮಿಕೊಂಡಿದ್ದ ಧರ್ಮ ಸಂರಕ್ಷಣಾ ಯಾತ್ರೆಯ ಜಿಲ್ಲಾ ಉಸ್ತುವಾರಿ ವಹಿಸಿದ್ದ ಆರೋಪಿ ನವೀನ್ ಚಂದ್ರ ಶೆಟ್ಟಿ ಧರ್ಮಸಂರಕ್ಷಣಾ ಯಾತ್ರೆಗೆ ಜನ ಸೇರಿಸುವ ಜವಾಬ್ಧಾರಿ ವಹಿಸಿದ್ದ. ಮನೆ ಮನೆ ಹಂಚಲು ಕರಪತ್ರ ಕಡಿಮೆಯಾದಾಗ ಧರ್ಮಸ್ಥಳ ಸಂಘದ ಸದಸ್ಯೆ, ವಿವಾಹಿತ ಮಹಿಳೆಗೆ ಕರೆ ಮಾಡಿ, ಹೆಚ್ಚುವರಿ ಕರಪತ್ರಗಳನ್ನು ತನ್ನ ಮನೆಗೆ ತಂದುಕೊಡುವಂತೆ ಹೇಳಿದ್ದನೆನ್ನಲಾಗಿದೆ. ಇದೇ ಕಾರಣಕ್ಕೆ ಆಕೆ ಆರೋಪಿ ನವೀನ್ ಚಂದ್ರ ಶೆಟ್ಟಿಯ ಮನೆಗೆ ಬಂದಿದ್ದಾಳೆ. ಮನೆಯಲ್ಲಿ ಆರೋಪಿ ಆಕೆಯ ಮಾನಭಂಗ ಮಾಡಲು ಯತ್ನಿಸಿದ್ದಾನೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದ ಸಂತ್ರಸ್ಥ ಮಹಿಳೆ ತನ್ನ ಮನೆಯವರಿಗೆ ದೂರು ನೀಡಿದ್ದು, ಮನೆಯವರು ಆರೋಪಿಗೆ ಸರಿಯಾಗಿಯೇ ವಿಚಾರಿಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಊರಿಡೀ ಹಬ್ಬುತ್ತಿದ್ದಂತೆ ತನ್ನ ಪಕ್ಷದ ಮುಖಂಡನ ಪರವಾಗಿ ಶಾಸಕರು ಬ್ಯಾಟಿಂಗ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತನ್ನ ಪಕ್ಷದ ಮರ್ಯಾದೆ ಹೋಗಬಾರದು ಎನ್ನುವ ಕಾರಣಕ್ಕೆ ಸಂತ್ರಸ್ಥೆಯ ಕಡೆಯವರೊಂದಿಗೆ ಪಂಚಾತಿಕೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಸಂತ್ರಸ್ಥೆಯ ಮನೆಯವರು ಪಂಚಾಯಿತಿಗೆ ಒಪ್ಪಲಿಲ್ಲ ಎನ್ನಲಾಗಿದೆ. ಅಲ್ಲದೇ ಸಂತ್ರಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮಾಹಿತಿ ನೀಡಿದ್ದು, ಅವರು ಅನ್ಯಾಯವಾಗಿದ್ದರೆ ದೂರು ಕೊಡಿ ಎಂದಿದ್ದಾರೆ ಎಂದು ತಿಳಿದುಬಂದಿದೆ, ಬಳಿಕ ಶುಕ್ರವಾರ ಸಂತ್ರಸ್ಥ ಮಹಿಳೆ ಅಮಾಸೆಬೈಲು ಠಾಣೆಯಲ್ಲಿ ದೂರು ನೀಡಿದ್ದಾರೆ. ರಾತ್ರಿ ಪ್ರಕರಣ ದಾಖಲಾಗುವ ಸಾಧ್ಯತೆಗಳನ್ನು ನಿರೀಕ್ಷಿಸಲಾಗಿದೆ. ಇತ್ತ ಆರೋಪಿ ನವೀನ್ ಚಂದ್ರ ಶೆಟ್ಟಿ ನಾಪತ್ತೆಯಾಗಿದ್ದು, ಜಾಮೀನು ಪಡೆಯಲು ಯತ್ನಿಸುತ್ತಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರು, ಈಗಾಗಲೇ ಮಾಹಿತಿ ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಘಟನೆಯನ್ನು ಪರಿಶೀಲಿಸಿ ಸತ್ಯಾಸತ್ಯತೆ ತಿಳಿದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದಿದ್ದಾರೆ. ಹಿಂದುಳಿದ ವರ್ಗಗಳ ಮುಖಂಡ ನಾಗೇಂದ್ರ ಪುತ್ರನ್ ಪ್ರತಿಕ್ರಿಯಿಸಿ, ಧರ್ಮ ರಕ್ಷಣೆಯ ಹೆಸರಿನಲ್ಲಿ ಅಧರ್ಮ ಮಾಡುತ್ತಿರುವ ಇಂತಹಾ ಕಾಮಾಂಧರ ಬಗ್ಗೆ ಕರ್ನಾಟಕದ ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ದೌರ್ಜನ್ಯಕ್ಕೊಳಗಾದ ಸಂತ್ರಸ್ಥೆಗೆ ನ್ಯಾಯ ಸಿಗುವುದಕ್ಕಾಗಿ ಎಲ್ಲರೂ ಒಮದಾಗಬೇಕಿದೆ. ಪೊಲೀಸರು ಸೊಮೋಟೋ ಪಕ್ರಕರಣ ದಾಖಲಿಸಿ ತನಿಖೆ ನಡೆಸಿ ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
