ಬೀಗ ಹಾಕಿದ್ದ ಮನೆ ನುಗ್ಗಿದ ಕಳ್ಳರು : ಲಕ್ಷಾಂತರ ಮೌಲ್ಯದ ನಗ ನಗದು ದೋಚಿ ಪರಾರಿ
ಕುಂದಾಪುರ: ಬೀಗ ಹಾಕಿದ್ದ ಮನೆಗೆ ರಾತ್ರಿ ಬೀಗ ಒಡೆದು ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಮತ್ತು ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಕುಂದಾಪುರದ ಬಿ ಬಿ ರೋಡ್ ನ ವೆಸ್ಟ ಬ್ಲಾಕ್ ನಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಬ್ರಹ್ಮಾವರ ತಾಲೂಕು ಐರೋಡಿ ಗ್ರಾಮದ ಜನಾರ್ದನ ಎಂಬವರ ಅಳಿಯ ರೋಹಿತ್ ಬಿ ಬಿ ರೋಡ್ ನ ವೆಸ್ಟ್ ಬ್ಲಾಕ್ ನಲ್ಲಿ ವಾಸಮಾಡಿಕೊಂಡಿದ್ದಾರೆ. ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಸಂಸಾರ ಸಮೇತ ಊರಿಗೆ ಬಂದಿದ್ದು, ಮೇ 21ರಂದು ಕುಂದಾಪುರದಲ್ಲಿರುವ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು. ಜುಲೈ 19ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆ ಬೀಗ ಒಡೆದಿರುವ ಬಗ್ಗೆ ಜನಾರ್ಧನ ಅವರಿಗೆ ಮಾಹಿತಿ ಬಂದಿದ್ದು, ಅದರಂತೆ ಪತ್ನಿ ಜೊತೆಗೆ ಹೋಗಿ ನೋಡಿದಾಗ ಮನೆ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಕಪಾಟಿನಲ್ಲಿದ್ದ ಮಗುವಿನ ಎರಡು ಚಿನ್ನದ ಚೈನ್, ಎರಡು ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಟಿಕ್ಕಿ,ಬೆಳ್ಳಿಯ 2 ಸಣ್ಣಕಾಲು ದೀಪ, ಬೆಳ್ಳಿಯ 2 ಹರಿವಾಣ, ಸಣ್ಣ ಸಣ್ಣ ಎಂಟು ಬೆಳ್ಳಿಯ ದೀಪಗಳು, ಒಂದು ಬೆಳ್ಳಿಯ ಚೆಂಬು, ಹಾಗೂ 10.000 ರೂ ನಗದು ಸೇರಿದಂತೆ ಅಂದಾಜು 1,45,000 ರೂಪಾಯಿ ಮೌಲ್ಯ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳರು ದೋಚಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.