ಸೈಬರ್ ಅಪರಾಧ, ತುರ್ತು ಸಂಪರ್ಕ ಜಾಗೃತಿಗೆ ಪೊಲೀಸ್ ಜಾಥಾಕ್ಕೆ ಕುಂದಾಪುರದಲ್ಲಿ ಚಾಲನೆ
ಕುಂದಾಪುರ: ಸೈಬರ್ ಅಪರಾಧಗಳು ನಡೆದಾಗ 1930 ಸಹಾಯವಾಣಿಗೆ ತತ್‌ಕ್ಷಣ ಕರೆ ಮಾಡಿದರೆ ಸುಲಭದಲ್ಲಿ ಅಪರಾಧಗಳನ್ನು ಪತ್ತೆ ಹಚ್ಚಬಹುದು. ಕಳಕೊಂಡ ಹಣ ಪಡೆಯಬಹುದು. ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೆ ಪೊಲೀಸರು ತತ್‌ಕ್ಷಣ ನಿಮ್ಮ ನೆರವಿಗೆ ಬರಲಿದ್ದಾರೆ ಎಂದು ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಹೇಳಿದರು.

ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ಉಡುಪಿ ಜಿಲ್ಲಾ ಪೊಲೀಸ್, ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಹಯೋಗದಲ್ಲಿ ಸೈಬರ್ ಅಪರಾಧ, ತುರ್ತು ಸಂಪರ್ಕ ಜಾಗೃತಿಗೆ ಪೊಲೀಸ್ ಜಾಥಾಕ್ಕೆ ಅವರು ಸೋಮವಾರ ಚಾಲನೆ ನೀಡಿ ಮಾತನಾಡಿದರು.
112 ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಆಗಿದ್ದು
ಧ್ವನಿ, ಎಸ್‌ಎಂಎಸ್, ಇ – ಮೇಲ್ ಹಾಗೂ 112 ಅಪ್ಲಿಕೇಶನ್ ಮೂಲಕ ತುರ್ತು ಸೇವೆ ಕೋರಬಹುದು. ’ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರ’ದಿಂದ ಸೇವಾ ಸಮನ್ವಯ ನಾಗರಿಕರಿಗೆ ದಿನದ 24 ಗಂಟೆಗಳ ಕಾಲ ತುರ್ತು ಪ್ರತಿಕ್ರಿಯೆ ಲಭ್ಯ ಇದೆ. ಪೊಲೀಸ್, ಅಗ್ನಿಶಾಮಕ ಸೇವೆಗಳಿಂದ ತ್ವರಿತ ಸಹಾಯ ಪಡೆಯಬಹುದು. ಅಪಘಾತ, ಅಗ್ನಿದುರಂತ, ಕಳ್ಳತನ, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಸೇರಿದಂತೆ ಯಾವುದೇ ದೂರು ದಾಖಲಿಸಬಹುದು. ಸೈಬರ್ ಅಪರಾಧಗಳಲ್ಲಿ ಡಿಜಿಟಲ್ ಅರೆಸ್ಟ್, ಎಪಿಕೆ ಫೈಲ್ ವಂಚನೆ, ನಕಲಿ ಷೇರ್ ಮಾರ್ಕೆಟ್ ಮತ್ತು ಟ್ರೇಡಿಂಗ್, ನಕಲಿ ಆನ್‌ಲೈನ್ ಗೇಮಿಂಗ್ ಆಪ್‌ಗಳು, ಆನ್‌ಲೈನ್ ಉದ್ಯೋಗ ಅಮಿಷ, ನಕಲಿ ಕಸ್ಟಮರ್ ಕೇರ್ ನಂಬರ್, ನಕಲಿ ಲೋನ್ ಆಪ್‌ಗಳು, ಸಿಬಿಐ ಮೊದಲಾದ ಹೆಸರಿನಲ್ಲಿ ವಂಚನೆ, ಒಎಲ್‌ಎಕ್ಸ್ ಮೊದಲಾದ ಆಪ್ ಹೆಸರಿನಲ್ಲಿ ವಂಚನೆ, ಹೂಡಿಕೆಯ ವಂಚನೆ, ಗಿಫ್ಟ್ ಮತ್ತು ಲಾಟರಿ ವಂಚನೆ, ನಗ್ನ ವಿಡಿಯೊ ಕರೆ ಮಾಡಿ ಬ್ಲಾಕ್‌ಮೇಲ್ ಮೊದಲಾದವುಗಳಿವೆ. ಇವುಗಳಿಗೆ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು ಎಂದರು.
ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಜಯರಾಮ ಡಿ ಗೌಡ, ಬಂದೂರು ಸರ್ಕಲ್ ಇನ್ಸ್‌ಪೆಕ್ಟರ್ ನೀಲೇಶ್ ಚೌಹಾಣ್, ಕುಂದಾಪುರ ಎಸ್‌ಐ ನಂಜಾ ನಾಯ್ಕ್, ಸಂಚಾರ ಠಾಣೆ ಎಸ್‌ಐ ನೂತನ್, ಗ್ರಾಮಾಂತರ ಎಸ್‌ಐ ಭೀಮಾಶಂಕರ್, ಕೊಲ್ಲೂರು ಎಸ್‌ಐ ವಿನಯ್ ಕೊರ್ಲಹಳ್ಳಿ, ಶಂಕರನಾರಾಯಣ ಎಸ್‌ಐ ಐ.ಆರ್.ಗಡ್ಕೇಕರ್, ಅಮಾಸೆಬೈಲು ಎಸ್‌ಐ ಅಶೋಕ್ ಕುಮಾರ್, ಬೈಂದೂರು ಎಸ್‌ಐ ತಿಮ್ಮೇಶ್, ಗಂಗೊಳ್ಳಿ ಎಸ್‌ಐ ಪವನ್ ನಾಯ್ಕ್ ಮೊದಲಾದವರು ಇದ್ದರು.