ಉಡುಪಿ: ಸೆಪ್ಟಂಬರ್ 22ರಿಂದ ಉಡುಪಿಯಲ್ಲಿ ದಸರಾ ಸಂಭ್ರಮ
ಉಡುಪಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ದಶಮ ವರ್ಷದ ಉಡುಪಿ ದಸರಾ ಪ್ರಯುಕ್ತ ನಡೆಯಲಿರುವ ಮಾತೃ ಸಂಗಮ ಮತ್ತು ನವರಾತ್ರಿ ವೈಭವದ ದಾಂಡಿಯಾ ಕಾರ್ಯಕ್ರಮಗಳ ಬಗ್ಗೆ ಮಹಿಳಾ ಸದಸ್ಯರ ಪೂರ್ವಭಾವಿ ಸಭೆಯು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.

ಈ ಬಾರಿಯ ಉಡುಪಿ ದಸರಾ ಸೆಪ್ಟಂಬರ್ 22ರಿಂದ ಅಕ್ಟೋಬರ್ 3ರವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ವೈಭವದಿಂದ ನಡೆಸಲು ಉದ್ದೇಶಿಸಲಾಗಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ತಿಳಿಸಿದರು.
ಉಡುಪಿ ದಸರ ದಶಮಾನೋತ್ಸವದ ಅಂಗವಾಗಿ ಮಾತೃ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಂಚಾಲಕಿ ವೀಣಾ ಎಸ್. ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಎಲ್ಲ ಭಜನಾ ಮಂಡಳಿ, ಮಹಿಳಾ ಮಂಡಳಿ, ಯೋಗ ಕೇಂದ್ರ, ಯುವತಿ ಮಂಡಳಿ, ಸ್ವಸಹಾದು ಸಂಘಗಳು, ಉಡುಪಿ ನಗರ ಸಭೆಯ ಎಲ್ಲ ಚುನಾಯಿತ ಮಹಿಳಾ ಸದಸ್ಯರು, ನೃತ್ಯ, ಸಂಗೀತ, ಸಾಮಾಜಿಕ, ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿರುವ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಳೆದ ಬಾರಿಯಂತೆ ಈ ಬಾರಿಯೂ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. 11 ದಿನಗಳ ಕಾಲ ನಡೆಯುವ ಈ ಶಾರದೋತ್ಸವ-ದಸರಾ ಕಾರ್ಯಕ್ರಮವನ್ನು ಯಶಸ್ವಿ ಯಾಗಿ ನಡೆಸಲು ಮಹಿಳಾ ಸ್ವಯಂ ಸೇವಕಿಯರ ತಂಡವನ್ನು ರಚಿಸಲಾಗುವುದು ಎಂದು ದಶಮ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾ ಉಮೇಶ್ ಆಚಾರ್ಯ ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಮಾತೃ ಸಂಗಮದ ಸಂಚಾಲಕಿಯರಾದ ಪದ್ಮಾ ರತ್ನಾಕರ್, ಸರೋಜಾ ಯಶವಂತ್, ತಾರಾ ಸತೀಶ್ ಮತ್ತಿತರರು ಭಾಗವಹಿಸಿದ್ದರು.
