ವಿದ್ಯಾರಣ್ಯ: ಮೌಲ್ಯಗಳ ಪಾಲನೆಯಾದಾಗ ವ್ಯಕ್ತಿತ್ವ ಉಳಿಯುತ್ತದೆ – ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಿವಿಮಾತು

ಕುಂದಾಪುರ: ಈ ದೇಶಕ್ಕೆ ಕಾನೂನು ಬರುವ ಮೊದಲು ಸಮಾಜದಲ್ಲಿ ನಾವೇ ಸೃಷ್ಟಿಸಿಕೊಂಡಿದ್ದ ಮೌಲ್ಯಗಳಿದ್ದವು. ಜನರು ಅದಕ್ಕೆ ಗೌರವ ನೀಡುತ್ತಿದ್ದರು. ಆದರೆ ಈಗ ಶ್ರೀಮಂತಿಕೆಗೆ ಮಣೆ ಹಾಕುವ ಪ್ರವೃತ್ತಿ ಬೆಳೆದಿದೆ. ನಿಷ್ಟೆ, ಪ್ರಾಮಾಣಿಕತೆಗೆ ಜಾಗವಿಲ್ಲದಂತಾಗಿದೆ. ನಮ್ಮ ಬದುಕಿಗೆ ನಾವೆ ಹಾಕಿಕೊಳ್ಳುವ ಮೌಲ್ಯಗಳನ್ನು ಗೌರವಿಸಿ ಪಾಲಿಸಿದಾಗ ನಮ್ಮ ವ್ಯಕ್ತಿತ್ವ ಉಳಿಯುತ್ತದೆ. ನಮ್ಮ ವ್ಯಕ್ತಿತ್ವದಲ್ಲಿ ತೃಪ್ತಿ ಎನ್ನುವ ಮೌಲ್ಯವನ್ನು ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸೋಮವಾರ ನುಡಿದರು. ಕುಂದಾಪುರದ ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಕ್ಯಾಂಪಸ್ ನ ಸುಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟುವುದಕ್ಕೆ ನಮ್ಮ ಯುವಕರನ್ನು ಸೃಷ್ಟಿ ಮಾಡಬೇಕು ಎಂಬ ಪಣ ತೊಟ್ಟು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿರಿಯ ವಯಸ್ಸಿನಲ್ಲಿಯೂ ಅವರ ಉತ್ಸಾಹ, ದೇಶಪ್ರೇಮ, ಮುಂದಿನ ಜನಾಂಗದ ಬಗ್ಗೆ ಕಾಳಜಿ ಅನುಕರಣೀಯವಾದುದು ಎಂದರು.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಸಂತೋಷ್ ಹೆಗ್ಡೆಯವರು ದೇಶದಲ್ಲಿನ ಭ್ರಷ್ಟಾಚಾರ, ಅನ್ಯಾಯಗಳ ವಿರುದ್ಧ ದನಿ ಎತ್ತಿದವರು. ನಿವೃತ್ತಿ ಜೀವನದಲ್ಲಿಯೂ ಕೈ ಕಟ್ಟಿ ಕುಳಿತವರಲ್ಲ. ಈ ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದೆ ಎಂದು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂತೋಷ ಹೆಗ್ಡೆಯವರ ಮೌಲ್ಯಗಳನ್ನು, ಅವರು ಪಾಲಿಸಿದ ತತ್ವಗಳನ್ನು ಅನುಸರಿಸಿದರೆ ಸದೃಢ ದೇಶ ಕಟ್ಟಬಹುದು ಎಂದರು.

ಇದೇ ಸಂದರ್ಭ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಶುಭ ಹಾರೈಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ನಿರೂಪಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಸಂಸ್ಥೆಯ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
