ಕೊಲ್ಲೂರು: ಸೌಪರ್ಣಿಕಾ ನದಿ ಬಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆ ಶವವಾಗಿ ಪತ್ತೆ
ಕುಂದಾಪುರ: ಕಳೆದ 2 ದಿನಗಳ ಹಿಂದೆ ಕೊಲ್ಲೂರಿನ ಸೌಪರ್ಣಿಕಾ ನದಿ ತೀರದಲ್ಲಿ ನಿಗೂಢ ಕಣ್ಮರೆಯಾಗಿ ನಾನಾ ಊಹಾಪೋಹಗಳಿಗೆ ಕಾರಣವಾಗಿದ್ದ ಬೆಂಗಳೂರು ಮೂಲದ ವಿವಾಹಿತ ಮಹಿಳೆಯ ಮೃತದೇಹ ಮಾವಿನಕಾರು ಎಂಬಲ್ಲಿ ಸೌಪರ್ಣಿಕಾ ನದಿಯಲ್ಲಿ ಪತ್ತೆಯಾಗಿದೆ.

ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಅವರ ಪುತ್ರಿ ವಸುಧಾ ಚಕ್ರವರ್ತಿ (46) ಅವರು ಆ. 28ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿದೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು.
ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ ಸಹಿತ ವಿವಿಧೆಡೆ ಹುಡುಕಾಟ ನಡೆಸಿದರೂ ಆಕೆಯ ಪತ್ತೆಯಾಗಿರಲಿಲ್ಲ. ಆಕೆ ಚಲಾಯಿಸಿಕೊಂಡು ಬಂದಿದ್ದ ಎಸ್ ಪ್ರೆಸ್ಸೋ ಕಾರಿನಲ್ಲಿ ಮೊಬೈಲ್ ಹಾಗೂ ಇನ್ನಿತರ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಆಕೆಯ ವಿಳಾಸ ಪತ್ತೆಯಾಗಿತ್ತು. ಈ ಬಗ್ಗೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು.

ದೇಗುಲದ ವತಿಯಿಂದ ಸೌಪರ್ಣಿಕಾ ನದಿ ಬಳಿ ಅಳವಡಿಸಲಾದ ಸಿ.ಸಿ.ಕೆಮರಾದಲ್ಲಿ ಆಕೆ ಬಹುದೂರ ಈಜಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಉತ್ತಮ ಈಜುಗಾರ್ತಿಯಾಗಿರುವ ವಸುಧಾ ಅವರು ಈಜಿ ದಡ ಸೇರಿದರೇ ಅಥವಾ ಉಕ್ಕಿ ಹರಿಯುತ್ತಿರುವ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋದರೇ ಎಂಬ ಅನುಮಾನಗಳು ಜನರಲ್ಲಿ ಮೂಡಿತ್ತು. ಮುಳುಗುತಜ್ಞ ಈಶ್ವರ ಮಲ್ಪೆ, ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯ ಪ್ರದೀಪ್ ಭಟ್ ಮೊದಲಾದವರು ನದಿಯ ವಿವಿಧ ಕಡೆ ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯ ನಡೆಸಲಾಗಿ ಶನಿವಾರ ಮಧ್ಯಾಹ್ನ ಆಕೆಯ ಮೃತದೇಹ ಪತ್ತೆಯಾಗಿದೆ. ಈಜುಗಾರ್ತಿಯಾಗಿದ್ದ ವಸುಧಾ ಸೌಪರ್ಣಿಕಾ ನದಿಯಲ್ಲಿ ಈಜಲೆಂದು ಹೋಗಿದ್ದರು ಎನ್ನಲಾಗಿದ್ದು, ನೀರಿನ ರಭಸಕ್ಕೆ ದಡಕ್ಕೆ ಬರಲಾಗದೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ವಸುಧಾ ವಿವಿಧ ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಒಂಟಿಯಾಗಿ ತೆರಳಿ ಧ್ಯಾನಾಸಕ್ತರಾಗುತ್ತಿದ್ದರು ಎಂದು ಕುಟುಂಬದ ಮೂಲಗಳು ಹೇಳಿದ್ದವು. ವಿದೇಶದಲ್ಲಿ ಉದ್ಯೋಗಿಯಾಗಿದ್ದ ವಸುಧಾ ಚಕ್ರವರ್ತಿ ಪ್ರೀತಿಸಿ ವಿವಾಹವಾಗಿದ್ದರೆನ್ನಲಾಗಿದೆ. ಬಳಿಕ ವಿಚ್ಛೇದನವೂ ಆಗಿದ್ದು, ಮಾನಸಿಕವಾಗಿ ನೊಂದಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಮನೆಯಲ್ಲಿಯೂ ಗಲಾಟೆ ಮಾಡಿಕೊಳ್ಳುತ್ತಿದ್ದರಿಂದ ಮನೆಯವರೂ ಆಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.