ಗಂಗೊಳ್ಳಿ ಶಾರದೋತ್ಸವ ಸಂಪನ್ನ;
ಕುಂದಾಪುರ: ಗಂಗೊಳ್ಳಿ ದಸರಾ ಎಂದೇ ಖ್ಯಾತಿ ಪಡೆದ ಗಂಗೊಳ್ಳಿ ಸೇವಾ ಸಂಘ ಶ್ರೀ ಶಾರದೋತ್ಸವ ಸಮಿತಿಯ 51ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಹಾಗೂ ನವರಾತ್ರಿ ಉತ್ಸವ ಸಂಪನ್ನಗೊಂಡಿತು.

ಗಂಗೊಳ್ಳಿಯ ಶ್ರೀ ಶಾರದಾ ಮಂಟಪದ ಬಳಿಯಿಂದ ಆರಂಭಗೊಂಡ ಶೋಭಾಯಾತ್ರೆಯು ಮೇಲ್‌ಗಂಗೊಳ್ಳಿಯ ಬಾವಿಕಟ್ಟೆ ತನಕ ಸಾಗಿ ಮರಳಿ ಗಂಗೊಳ್ಳಿ ಮುಖ್ಯರಸ್ತೆ ಮೂಲಕ ಸಾಗಿ ಬಂದು ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಕೊನೆಗೊಂಡಿತು. ಗಂಗೊಳ್ಳಿಯ ಬಂದರಿನಲ್ಲಿ ಪಂಚಗಂಗಾವಳಿ ನದಿಯಲ್ಲಿ ಶಾರದಾ ವಿಗ್ರಹದ ಜಲಸ್ಥಂಭನ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ಶ್ರೀ ಶಾರದಾ ಮಾತೆಯನ್ನು ನೋಡಿ ಕಣ್ತುಂಬಿಕೊಳ್ಳಲು ಜನತೆ ಸಾವಿರಾರು ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದರು. ಆಕರ್ಷಕ ಚಂಡೆ ವಾದನ, ಹುಲಿವೇಷ, ಗೊಂಬೆಗಳು, ಛದ್ಮವೇಷಗಳ ತಂಡ ಸೇರಿದಂತೆ ಹಲವು ವೇಷಗಳು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದವು.
ಕುಂದಾಪುರ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ (ಪ್ರಭಾರ) ನಿಲೇಶ್ ಚೌಹಾಣ್ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪವನ್ ನಾಯಕ್, ಸುನೀಲ್ ಕುಮಾರ್ ಹಾಗೂ ವಿವಿಧ ಠಾಣೆಯ ಪೊಲೀಸ್ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಮಿತಿಯ ಅಧ್ಯಕ್ಷ ಶೇಖರ ಜಿ., ಪ್ರ.ಕಾರ್ಯದರ್ಶಿ ಪ್ರಶಾಂತ ಎಸ್‌ಆರ್‌ಜಿ., ಕಾರ್ಯದರ್ಶಿ ಎಂ.ಸಂದೀಪ ಖಾರ್ವಿ, ಪುರೋಹಿತ ಜಿ.ರಾಘವೇಂದ್ರ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ರೇಣುಕಾ ವಾಸುದೇವ ಶೇರುಗಾರ್, ಕಾರ್ಯದರ್ಶಿ ಸುರೇಖಾ ನಾಗಪ್ಪ ಕಾನೋಜಿ ಮೊದಲಾದವರ ನೇತೃತ್ವದಲ್ಲಿ ಶೋಭಾಯಾತ್ರೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.