ಕುಂದಾಪುರ: ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 156 ನೇ ಗಾಂಧೀಜಿ – ಶಾಸ್ತ್ರೀಜಿ ಜನ್ಮದಿನಾಚರಣೆ
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ 156 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಉಡುಪಿ ಜಿಲ್ಲಾ ಸ್ಕೌಟ್ಸ್ ಕಾರ್ಯದರ್ಶಿ ಆನಂದ ಅಡಿಗ ದೀಪ ಬೆಳಗಿಸಿ ಉದ್ಘಾಟಿಸಿದರು.

ವಿದ್ಯಾರ್ಥಿಗಳಾದ ಆರಾಧ್ಯ ಕೆ.ಬಿ, ಜೀವಿಕಾ, ಶ್ರಾವಣಿ ಹಾಗೂ ನವನೀತ ಇವರು ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿಯ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಗಾಣಿಗ, ಉಪಪ್ರಾಂಶುಪಾಲ ಸುಜಯ್ ಕೋಟೆಗಾರ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜ ಹಾಗೂ ಸ್ಕೌಟ್ಸ್ ಶಿಕ್ಷಕ ಸುಬ್ರಮಣ್ಯ ಅವರು ಗಾಂಧೀಜಿ ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕಬ್ಸ್ ಶಿಕ್ಷಕಿ ಸುನೀತಾ ಸ್ವಾಗತಿಸಿ, ಬನ್ನಿ ಶಿಕ್ಷಕಿ ಅಶ್ವಿನಿ ವಂದಿಸಿದರು. ಬುಲ್ ಬುಲ್ ಶಿಕ್ಷಕಿ ಪದ್ಮಾವತಿ ನಿರೂಪಿಸಿದರು. ಸ್ಕೌಟ್ಸ್, ಗೈಡ್ಸ್ ,ಎನ್.ಸಿ.ಸಿ , ಶಾಲಾ ಮಕ್ಕಳು ಹಾಗೂ ಸಂಸ್ಥೆಯ ಬೋಧಕ –ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಸರ್ವಧರ್ಮ ಪ್ರಾರ್ಥನೆ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.