ಹೆಮ್ಮಾಡಿ: ಅನುಮಾನಾಸ್ಪದವಾಗಿ ನಾಪತ್ತೆಯಾದ ಕಾಲೇಜು ವಿದ್ಯಾರ್ಥಿ ಹೊಳೆಯಲ್ಲಿ ಶವವಾಗಿ ಪತ್ತೆ!

ಕುಂದಾಪುರ: ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಾರದೆ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ, ನಮೇಶ್ (17) ನ ಮೃತದೇಹ ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ. ನಮೇಶ್ ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಇವರ ಪುತ್ರ. ಗುರುವಾರ ದಿನಾಂಕ 17 ಸೆಪ್ಟಂಬರ್ 2025ರಂದು ಬೆಳಿಗ್ಗೆ ತನ್ನ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟು ಬೈಕಿನಲ್ಲಿ ಹೆಮ್ಮಾಡಿಯ ಕಾಲೇಜಿಗೆ ಹೋಗಿದ್ದ. ಸಂಜೆ ಕಾಲೇಜಿನಿಂದ ತೆರಳಿದ್ದ ನಮೇಶ್ ಮನೆಗೆ ಬಂದಿರಲಿಲ್ಲ. ಮೊಬೈಲ್ ಇಲ್ಲದ ಕಾರಣ ನಮೇಶ್ ಎಲ್ಲಿಗೆ ಹೋಗಿದ್ದಾನೆ ಎನ್ನುವುದು ಸ್ಪಷ್ಟವಾಗಿರಲಿಲ್ಲ.




ಬಳಿಕ ಮನೆಯವರು ಹಾಗೂ ಸ್ಥಳೀಯರು ನಮೇಶ್ ಗಾಗಿ ಕುಡುಕಾಟ ನಡೆಸಿದ್ದಾರೆ. ಆಗ ಆತನ ಬೈಕ್ ಮತ್ತು ಕಾಲೇಜು ಬ್ಯಾಗ್ ಹೆಮ್ಮಾಡಿ ಸಮೀಪದ ಕನ್ನಡಕುದ್ರು ನದಿ ತೀರದಲ್ಲಿ ಪತ್ತೆಯಾಗಿತ್ತು. ಇದರಿಂದ ಗಾಬರಿಗೊಂಡ ಮನೆಯವರು ಪೊಲೀಸ್ ಕಂಪ್ಲೈಂಟ್ ಮಾಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಶುಕ್ರವಾರವೂ ಹುಡುಕಾಟ ಮುಂದುವರೆಸಿದ್ದು, ಅಗ್ನಿಶಾಮಕದಳ ಹಾಗೂ ಗಂಗೊಳ್ಳಿಯ ಈಜುಪಟು ದಿನೇಶ್ ಖಾರ್ವಿ ಹಾಗೂ ಸ್ಥಳೀಯರು ಕನ್ನಡಕುದ್ರು ನದಿಯಲ್ಲಿ ಸಂಜೆಯ ತನಕವೂ ಹುಡುಕಾಟ ನಡೆಸಿದ್ದರು. ಆದರೆ ಶುಕ್ರವಾರವೂ ನಮೇಶ್ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಿಗ್ಗೆ ನಮೇಶ್ ಮೃತದೇಹ ಗಂಗೊಳ್ಳಿ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ.




ಸಾವಿನ ಸುತ್ತ ಅನುಮಾನದ ಹುತ್ತ!: ಒಂಭತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರ ಶಾಲೆಗೂ ತಿಳಿದು ಮನೆಯವರ ಗಮನಕ್ಕೂ ಬಂದಿತ್ತೆನ್ನಲಾಗಿದೆ. ಬಳಿಕ ಎಲ್ಲವೂ ತಣ್ಣಗಾಗಿತ್ತು. ಇದೀಗ ಮತ್ತೆ ಇಬ್ಬರೂ ಸಂಪರ್ಕದಲ್ಲಿ ಇದ್ದರು ಎನ್ನಲಾಗಿದೆ. ಈ ವಿಚಾರ ಮತ್ತೆ ವಿದ್ಯಾರ್ಥಿನಿಯ ಮನೆಯವರಿಗೆ ತಿಳಿದು ರಂಪಾಟ ಮಾಡಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಏನಾದರೂ ಘಟನೆಗಳು ಸಂಭವಿಸಿರಬಹುದೇ ಎನ್ನುವ ಅನುಮಾನಗಳು ಸ್ಥಳೀಯರಲ್ಲಿ ಕಾಡುತ್ತಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ದೊರಕಿದ್ದು ಎರಡೂ ಠಾಣೆಗಳಲ್ಲಿ ತನಿಖೆ ನಡೆಯುತ್ತಿದೆ. ಆಪದ್ಭಾಂಧವ ಇಬ್ರಾಹಿಂ ಗಂಗೊಳ್ಳಿಯ ತಂಡ ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.