ಜೀವನದ ಅತ್ಯಂತ ದೊಡ್ಡ ಸಂಪತ್ತು ಬಾಲ್ಯ : ರಂಗ ರಂಗು ರಜಾ ಮೇಳ ಉದ್ಘಾಟಿಸಿದ ಡಾ. ಶ್ರೀಪಾದ ಭಟ್
ಕುಂದಾಪುರ: ಬಾಲ್ಯವು ಒಂದು ಅಮೂಲ್ಯ ಸಂಪತ್ತು. ಇದನ್ನು ಪ್ರತಿಕ್ಷಣವೂ ಸಂಭ್ರಮಿಸಬೇಕು. ಸೃಜನಶೀಲ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದಾಗ ಬಾಲ್ಯ ಪೂರ್ಣವಾಗುತ್ತದೆ. ಅದಕ್ಕಾಗಿ ಮಕ್ಕಳ ಶಿಬಿರಗಳು ಬದುಕಿಗೆ ಪೂರವಾಗುತ್ತದೆ ಎಂದು ರಂಗ ನಿರ್ದೇಶಕ, ಕಲಾವಿದ ಡಾ. ಶ್ರೀಪಾದ ಭಟ್ ಹೇಳಿದ್ದಾರೆ.

ಅವರು ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ) ವತಿಯಿಂದ ಹಮ್ಮಿಕೊಳ್ಳಲಾದ ಸರ್ಕಾರಿ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗಾಗಿ ಉಚಿತ ರಂಗ ರಂಗು ಬೇಸಿಗೆ ರಜಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ವಿವಿಧ ಕಥೆ ಕವನಗಳನ್ನು ವಿಸ್ತರಿಸುತ್ತಾ ಇಲ್ಲಿ ಹತ್ತು ದಿನಗಳ ಕಾಲ ವೈವಿಧ್ಯಮಯ ಚಟುವಟಿಕೆಗಳು ನಾಟಕ ಪ್ರದರ್ಶನ ಇತ್ಯಾದಿಗಳು ಇದ್ದು ಮಕ್ಕಳು ಇಲ್ಲಿನ ಎಲ್ಲಾ ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭ ಸಮುದಾಯ ಕುಂದಾಪುರದ ಅಧ್ಯಕ್ಷ ಡಾ. ಸದಾನಂದ ಬೈಂದೂರು, ಶಿಬಿರ ನಿರ್ದೇಶಕರಾದ ವಾಸುದೇವ ಗಂಗೇರ, ಅಕ್ಷರ ಸಾಂಸ್ಕೃತಿಕ ಸಂಘಟನೆಯ ರವಿ ವಿಎಂ ಉಪಸ್ಥಿತರಿದ್ದರು. ಡಾ ಸದಾನಂದ ಬೈಂದೂರು ಪ್ರಸ್ತಾವಿಸಿ ನಿರೂಪಿಸಿದರು. ರಂಗ ನಿರ್ದೇಶಕ ವಾಸುದೇವ ಗಂಗೇರ ಶಿಬಿರವನ್ನು ನಿರ್ದೇಶಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಚಿನ್ನ ವಿ ಗಂಗೇರ, ರೋಹಿತ್ ಬೈಕಾಡಿ, ಗಣೇಶ ಶೆಟ್ಟಿ, ಕೆ ಎಂ ಹೊಸೇರಿ, ಮನೋಹರ ಮಣಿಪಾಲ, ಬಾಲಕೃಷ್ಣ ಕೆ ಎಂ, ಉತ್ಕಲ, ತಿಮ್ಮಪ್ಪ ಗುಲ್ವಾಡಿ, ವಿಕ್ರಮ ಕುಂದಾಪುರ, ಸಂದೇಶ ಕುಂದಾಪುರ, ಶಂಕರ್ ಅನಗಳ್ಳಿ, ನರಸಿಂಹ ಎಚ್, ಚಂದ್ರಶೇಖರ ವಿ,ಶ್ರಾವ್ಯ ಮುಂತಾದವರು ಭಾಗವಹಿಸಲಿದ್ದಾರೆ. ಲಂಕೇಶ್, ಸತ್ಯನ್, ಶೋಧನ್, ದಕ್ಷ, ಶ್ರೇಯಾ ಲಕ್ಷ್ಮಣ್, ಮುಂತಾದವರು ನಿರ್ವಹಿಸಲಿದ್ದಾರೆ

ರಜಾ ಮೇಳದಲ್ಲಿ ಮಣ್ಣಿನೊಂದಿಗೆ ಆಟ ಕಾಗದ ಕತ್ತರಿ ಆಟ, ಆಕಾಶ ವೀಕ್ಷಣೆ, ಟೆಲಿಸ್ಕೋಪ್ ಬಗ್ಗೆ ಮಾಹಿತಿ, ರಂಗಾಟಗಳು ನಟನೆ, ಅಭಿನಯ, ನಾಟಕ, ಮಕ್ಕಳ ಸಂತೆ, ಗಾಳಿಪಟ ಉತ್ಸವ, ಅಗ್ನಿ ಶಮನ ಪ್ರಾತ್ಯಕ್ಷಿಕೆ ಹೀಗೆ ಹತ್ತು ಹಲವು ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
