ತಳಮಟ್ಟದಲ್ಲಿ ಪಕ್ಷ ಬಲಪಡಿಸಲು ಬಿಜೆಪಿ ಹೆಜ್ಜೆ : ಕಂದಾವರ ಬಿಜೆಪಿ ಶಕ್ತಿಕೇಂದ್ರಕ್ಕೆ ನೂತನ ಸಾರಥ್ಯ
ಕುಂದಾಪುರ: ಸ್ಥಳೀಯಾಡಳಿತದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾಶಕ್ತಿಕೇಂದ್ರಗಳಿಗೆ ಶಕ್ತಿ ತುಂಬುವ ಕೆಲಸಗಳಿಗೆ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೆಜ್ಜೆ ಇಟ್ಟಿದ್ದಾರೆ. ಹಲವು ಶಕ್ತಿಕೇಂದ್ರಗಳಿಗೆ ಹೊಸ ಸಾರಥಿಗಳನ್ನು ನಿಯೋಜಿಸಿರುವ ಕೊಡ್ಗಿ, ಭಾನುವಾರ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಕ್ತಿ ಕೇಂದ್ರಗಳಿಗೆ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿದರು. ಕಂದಾವರ ಗ್ರಾಮದ ನೂತನ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಸುಧಾಕರ್ ಪೂಜಾರಿ ಮತ್ತು ಕಾರ್ಯದರ್ಶಿಯಾಗಿ ರವೀಂದ್ರ ದೇವಾಡಿಗ ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ಶಕ್ತಿಕೇಂದ್ರ ವ್ಯಾಪ್ತಿಯ ಬೂತ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಕೊಡ್ಗಿ, ಪಕ್ಷವನ್ನು ಗ್ರಾಮ ಮಟ್ಟದಿಂದಲೇ ಬಲಪಡಿಸಬೇಕು. ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಮುಂಬರುವ ಚುನಾವಣೆಗೆ ಸಿದ್ಧರಾಗಬೇಕು ಎಂದು ಕರೆನೀಡಿದರು. ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಕ್ತಿಕೇಂದ್ರದ ಕಾರ್ಯವೈಖರಿ ಹಾಗೂ ಸಂಘಟನಾ ಜವಾಬ್ದಾರಿಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್, ಮುಖಂಡರಾದ ಶೀನಾ ಪೂಜಾರಿ, ಶಕ್ತಿಕೇಂದ್ರದ ಮಾಜಿ ಅಧ್ಯಕ್ಷ ರಾಮು ಶೇರಿಗಾರ್, ಕಂದಾವರ ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು, ಕಂದಾವರ ಭಾಗದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರು ಪ್ರಾಸ್ತಾವಿಸಿದರು. ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ರಾಮು ಶೇರಿಗಾರ್ ನಿರೂಪಿಸಿ, ಸಂತೋಷ್ ಪೂಜಾರಿ ವಂದಿಸಿದರು.
