ಇದು ತೋಡಲ್ಲ; ರಸ್ತೆ! – ಅರ್ಧ ಶತಮಾನದ ಬೇಡಿಕೆಗಳಿಗೆ ಕೊಳ್ಳಿ ಇಟ್ಟ ಸ್ಥಳಿಯಾಡಳಿತ!?
ಕುಂದಾಪುರ: ಐವತ್ತು ವರ್ಷಗಳಿಂದ ಜನಸಾಮಾನ್ಯರ ಬೇಡಿಕೆಗಳಿಗೆ ಸರ್ಕಾರ ಮತ್ತು ಸ್ಥಳೀಯಾಡಳಿತ ಕ್ಯಾರೇ ಅನ್ನದೇ ಜನಸಾಮಾನ್ಯರ ನಿತ್ಯ ಬದುಕಿನೊಂದಿಗೆ ಆಟವಾಡುತ್ತಿರುವ ಘಟನೆ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸನ್ಯಾಸಿಬೈಲ್ ಎಂಬಲ್ಲಿ ನಡೆಯುತ್ತಿದೆ. ದಶಕಗಳಿಂದಲೂ ಜನ ಬೇಡಿಕೊಳ್ಳುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅನುದಾನದ ಕೊರತೆ ನೆಪವೊಡ್ಡುತ್ತಿದ್ದಾರೆ ಗ್ರಾಮದ ಹಿರಿಯ ಮಹಿಳೆ ಗಿರಿಜಾ ಆಕ್ರೋಶ ಹೊರಹಾಕಿದ್ದಾರೆ.


ಹೌದು, ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಸಮೀಪದ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ ಸನ್ಯಾಸಿಬೈಲ್ ಕಳೆದ 50 ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಸುಮಾರು 45 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ಕೊಡಪಾಡಿ ಎಂಬಲ್ಲಿಂದ ಕಂಚುಗೋಡು ಸಂಪರ್ಕಿಸುವ ಈ ಮಣ್ಣಿನ ರಸ್ತೆಗಿನ್ನೂ ಕಾಯಕಲ್ಪ ನೀಡಿಲ್ಲ. ಇದರಿಂದಾಗಿ ಇಲ್ಲಿಂದ ಶಾಲೆ, ಪಡಿತರ, ಆಸ್ಪತ್ರ, ಸರ್ಕಾರೀ ಕಚೇರಿಗಳಿಗೆ ಹೋಗುವಾಗ ಮಳೆಗಾಲದಲ್ಲಿ ಅತೀವ ತೊಂದರೆಯುಂಟಾಗುತ್ತಿದೆ ಎಂದು ಗ್ರಾಮಸ್ಥೆ ಮಮತಾ ಹೇಳಿದ್ದಾರೆ.


ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯತ್ ಗಮನಕ್ಕೂ ತರಲಾಗಿದೆ. ಆದರೆ ಈ ರಸ್ತೆ ಅಭಿವೃದ್ದಿಗೆ ಯಾವುದೆ ಅನುದಾನ ಲಭ್ಯವಿಲ್ಲ ಎನ್ನುವ ಉತ್ತರ ಕೇಳಿ ಬರುತ್ತಿದೆ. ಶಾಸಕರು ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡುತ್ತಿದ್ದಾರೆ ಆದರೆ ಯಾವುದೆ ಪ್ರಯೋಜನ ಇಲ್ಲ ಎಂದು ಸಂತ್ರಸ್ಥ ಜಯಶೀಲ ಆರೋಪಿಸಿದ್ದಾರೆ.



ಸುಮಾರು 15ಕ್ಕೂ ಹೆಚ್ಚು ಮಕ್ಕಳು ಶಾಲೆ-ಕಾಲೇಜುಗಳಿಗೆ ಹೋಗಲು ಇದೇ ರಸ್ತೆ ಬಳಸುತ್ತಾರೆ. ಶಾಲೆಗೆ ಹೋಗುವಾಗ ಬಟ್ಟೆ ಕೆಸರಾದರೆ ಶಾಲೆಯಲ್ಲಿ ನಮಗೆ ಅವಮಾನವಾಗುತ್ತದೆ ಎಂದು ಇಲ್ಲಿನ ಪುಟಾಣಿ ಮಕ್ಕಳು ಪೃಥ್ವಿನ್ ಮತ್ತು ತನೀಶ್ ಅಲವತ್ತುಕೊಳ್ಳುತ್ತಿದ್ದಾರೆ.



ಚುನಾವಣೆ ಸಂದರ್ಭ ರಸ್ತೆ ಸಮಸ್ಯೆ ಪರಿಹಾರದ ಭರವಸೆ ನೀಡುತ್ತಾರೆ. ಗೆದ್ದ ಮೇಲೆ ತಿರುಗಿಯೂ ನೋಡಲ್ಲ. ಈ ಬಾರಿಯೂ ರಸ್ತೆ ದುರಸ್ತಿ ಮಾಡಿಕೊಡದಿದ್ದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮದ ಹಿರಿಯ ರಾಮ ಪೂಜಾರಿ ಎಚ್ಚರಿಸಿದ್ದಾರೆ.


ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸನ್ಯಾಸಿಬೈಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಯೇ ಕಾದು ನೋಡಬೇಕಿದೆ.
ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ ವಾಸ್ತವ ಡಾಟ್ ಕುಂದಾಪುರ
