ಉಡುಪಿ: ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಶಿಕ್ಷಕರ ಮೇಲೆ ದೌರ್ಜನ್ಯ ಆರೋಪ, ಕಳಪೆ ಬಿಸಿಯೂಟದ ಪ್ರಕರಣ : ಅಮಾನತ್ತಿಗೆ ಆಗ್ರಹ

ಉಡುಪಿ: ಮಹಿಳೆ ಮತ್ತು ಮೀಸಲಾತಿಗಳ ದುರ್ಬಳಕೆಯ ಮನೋಭಾವ ಒಬ್ಬ ವ್ಯಕ್ತಿಗೆ ಎಷ್ಟು ದಾರ್ಷ್ಟ್ಯ ಮೆರೆಯಲು ಕಾರಣವಾಗಬಹುದು ಎನ್ನುವುದಕ್ಕೆ ಉಡುಪಿಯಲ್ಲಿ ಕಾರ್ಯನಿರ್ವಹಿಸುವ ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತಮ ಊದಾಹರಣೆ ಎಂದರೆ ತಪ್ಪಾಗದು. ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರು ತಮ್ಮ ವ್ಯಾಪ್ತಿಯ ಶಿಕ್ಷಕರಿಗೆ ನಿರಂತರ ಕಿರುಕುಳ ನೀಡುತ್ತಿರುವ ಆರೋಪದ ಜೊತೆಗೆ ಮೇಲಧಿಕಾರಿಗಳ ಮಾತಿಗೇ ಕ್ಯಾರೇ ಎನ್ನದ ಮನೋಭಾವ ಬೆಳೆಸಿಕೊಂಡಿರುವುದು ಕೇಳಿ ಬಂದಿದೆ. ಅಲ್ಲದೇ ಕರ್ತವ್ಯ ಲೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮೇಲಧಿಕಾರಿಗಳು ಬಿಇಓ ಅಮಾನತ್ತಿಗೆ ಶಿಫಾರಸ್ಸು ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಏನಿದು ಘಟನೆ! ರಾಜ್ಯದಲ್ಲಿರುವ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವ ಶಿಕ್ಷಕರ ದಾಖಲೆಗಳನ್ನು ಕಾರ್ಯನಿರ್ವಹಣಾ ವರದಿಯೊಂದಿಗೆ ತುರ್ತಾಗಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 74 ಶಿಕ್ಷಕರುಗಳು ಬಡ್ತಿ ಪಡೆಯಲು ಅರ್ಹತೆ ಹೊಂದಿದ್ದು, ಇದರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌ.ಶಾ.ವಿ) ಉಡುಪಿ ಇಲ್ಲಿಯ 4 ಪ್ರೌಢಶಾಲಾ ಸಹ ಶಿಕ್ಷಕರನ್ನು ಹೊರತುಪಡಿಸಿ ಉಳಿದ 70 ಶಿಕ್ಷಕರ ಪೂರ್ಣ ಪ್ರಸ್ತಾವನೆಯನ್ನು ಆಗಸ್ಟ್ 19ರಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಲಾಗಿತ್ತು.
ಆದರೆ, ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌ.ಶಾ.ವಿ) ಉಡುಪಿ ಇಲ್ಲಿಯ 4 ಪ್ರೌಢಶಾಲಾ ಸಹ ಶಿಕ್ಷಕರುಗಳ ಪ್ರಸ್ತಾವನೆಯಲ್ಲಿ ಶಿಕ್ಷಕರುಗಳ ಕಾರ್ಯನಿರ್ವಹಣಾ ವರದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹಿ ಮಾಡದೇ ಅಗತ್ಯ ದಾಖಲೆಗಳಿಗೆ ಮೊಹರು ಹಾಕಿ ಸಹಿ ಮಾಡದೇ ಅಡ್ಡ ಗೆರೆ ಎಳೆದು ಹೊಡೆದುಹಾಕಿ ಜುಲೈ 27ರಂದು ಉಡುಪಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಉಪನಿರ್ದೇಶಕರ ಕಚೇರಿಗೆ ಕಳಿಸಲಾಗಿತ್ತು. ಈ ಬಗ್ಗೆ ಬಿಇಓ ಗೆ ಹಲವು ಬಾರಿ ಸೂಚನ ನೀಡಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ಅಲ್ಲದೇ ಸದರಿ ಶಿಕ್ಷಕರ ಕಾರ್ಯನಿರ್ವಹಣಾ ವರದಿ ಸಲ್ಲಿಸುವ ಬಗ್ಗೆ ಈಗಾಗಲೇ ಉಪನಿರ್ದೇಶಕರೊಂದಿಗೆ ಚರ್ಚಿಸಿರುವ ಪ್ರಯುಕ್ತ ನಿಮ್ಮ ಪತ್ರಕ್ಕೆ ಯಾವುದೇ ವಿವರಣೆ ನೀಡುವ ಅಗತ್ಯವಿಲ್ಲ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದರಿಂದಾಗಿ ಶಿಕ್ಷಕರುಗಳ ಪ್ರಸ್ತಾವನೆಯು ಸಂಬಂಧಿತ ಪ್ರಾಧಿಕಾರಕ್ಕೆ ಸಲ್ಲಿಕೆಯಾಗದೆ, ಪ್ರೌಢಶಾಲಾ ಸಹ ಶಿಕ್ಷಕ ವೃಂದದಿಂದ ಉಪನ್ಯಾಸಕ ವೃಂದಕ್ಕೆ ಬಡ್ತಿ ಪಡೆಯುವುದರಿಂದ ವಂಚಿತರಾಗುವ ಸಂಭವವಿದೆ. ಅಲ್ಲದೇ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮೇಲಾಧಿಕಾರಿಗಳ ಪತ್ರಕ್ಕೆ ವಿವರಣೆ ನೀಡುವ ಅಗತ್ಯವಿಲ್ಲವೆಂದು ಉದ್ಧಟತನದಿಂದ ವರ್ತಿಸಿರುವುದು ಹಾಗೂ ಕರ್ತವ್ಯ ಲೋಪ, ಬೇಜವಾಬ್ದಾರಿ, ನಿರ್ಲಕ್ಷ್ಯ ಮತ್ತು ಮೇಲಧಿಕಾರಿಗಳ ಬಗ್ಗೆ ಅಗೌರವ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇದರ ಜೊತೆಗೆ ವಿಕಲ ಚೇತನ ವಿಭಾಗಕ್ಕೆ ನೇಮಕ ಮಾಡಿದ BIERT( Block inclusuve education resource teacher) ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳದೆ ಉಢಾಫೆ ಮಾಡಿದ್ದು, ಮೇಲಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಇಷ್ಟೇ ಅಲ್ಲದೇ ನಿರಂತರವಾಗಿ ಕೆಲವು ಶಿಕ್ಷಕಿಯರಿಗೆ ದಿನನಿತ್ಯ ಕಿರಿಕಿರಿ ಉಂಟು ಮಾಡುತ್ತಿರುವುದಾಗಿಯೂ, ಬಿಇಓ ಹೇಳಿದಂತೆ ಕೇಳದೇ ಇದ್ದರೆ ಮತ್ತೆ ಹಿಂಸೆ ನೀಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಬಿಸಿಯೂಟದಲ್ಲಿಯೂ ಕಳಪೆ ವಸ್ತುಗಳ ಬಳಕೆ ಮಾಡುತ್ತಿರುವ ಬಗ್ಗೆಯೂ ಆರೋಪ ಕೇಳಿ ಬಂದಿದ್ದು, ಅವಧಿ ಮುಗಿದ ಕೋಳಿ ಮೊಟ್ಟೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಮೇಲಧಿಕಾರಿಗಳು ಅಮಾನತ್ತಿಗೆ ಶಿಫಾರಸ್ಸು ಮಾಡಿದ್ದರೂ ಬಿಇಓ ಯಲ್ಲಮ್ಮ ಅಧಿಕಾರ ಮತ್ತು ರಾಜಕೀಯ ಪ್ರಭಾವ ಬಳಸಿ ಅಮಾನತ್ತು ರದ್ಧುಗೊಳಿಸುವ ಬಗ್ಗೆ ಶತಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೇ ಅಮಾನತ್ತಿನ ಆದೇಶಕ್ಕೆ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಶಿಕ್ಷಕಿಯರಿಗೆ ಕಿರುಕುಳ ನೀಡುತ್ತಿರುವ ಬಿಇಒ ರಕ್ಷಣೆ ನಿಂತಿರುವುದು ಎಷ್ಟು ಸರಿ ಎನ್ನುವ ಆಕ್ರೋಶ ಕೇಳಿ ಬಂದಿದೆ. ಇನ್ನಾದರೂ ಇಲಾಖೆ ಹಾಗೂ ಸಚಿವಾಲಯ ಇ ಬಗ್ಗೆ ಪಾರದರ್ಶಕ ಕ್ರಮಕ್ಕೆ ಮುಂದಾಗುವುದೇ ಕಾದು ನೋಡಬೇಕಿದೆ.
