ಕೋಟ: ಅಮೃತೇಶ್ವರೀ ಮೇಳದ ಯಕ್ಷ ಸಾಧಕರಿಗೆ ಸನ್ಮಾನ
ಕುಂದಾಪುರ: ಕೋಟದ ಅಮೃತೇಶ್ವರೀ ದೇಗುಲದಲ್ಲಿ ಶ್ರೀ ಕ್ಷೇತ್ರ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಸೇವೆಯಾಟದ ಸಂದರ್ಭ ಯಕ್ಷ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿಯನ್ನು ಬಳಾಲುಕೊಪ್ಪ ಸದಾನಂದ ಹೆಬ್ಬಾರ್ ಇವರಿಗೆ ಹಾಗೂ ಕೋಟ ದಿ.ವೈಕುಂಠ ಸ್ಮರಣಾರ್ಥ ಯಕ್ಷ ಕಿನ್ನರ ಪ್ರಶಸ್ತಿಯನ್ನು ಹಿರಿಯ ಕಲಾವಿದ ಬಾಬು ಕುಲಾಲ್ ಹಳ್ಳಾಡಿ ಇವರಿಗೆ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಹೇರಂಜಾಲು ಗೋಪಾಲ ಗಾಣಿಗರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಯಕ್ಷಗಾನ ಮೇಳದ ಪರಿಕರಕ್ಕೆ ಸಹಕಾರ ನೀಡಿದವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ಶೆಟ್ಟಿ ಗಿಳಿಯಾರು ಮಾತನಾಡಿ, ಅಮೃತೇಶ್ವರೀ ಮೇಳದಲ್ಲಿ ಹಲವು ಕಲಾವಿದರು ಗೆಜ್ಜೆ ಕಟ್ಟಿ ಪ್ರಸಿದ್ಧಿ ಹೊಂದಿದ್ದಾರೆ ಅವರಲ್ಲಿ ಪ್ರಾಚಾರ್ಯ ಉಪ್ಪೂರ,ಕೋಟ ವೈಕುಂಠರಂತಹ ಕಲಾವಿದರು ಬಹುದೊಡ್ಡ ಕೊಡುಗೆಯನ್ನೆ ನೀಡಿದ್ದಾರೆ, ಅಂತಹ ಮಹಾನ್ ಕಲಾವಿದರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಹಿರಿಯ ಕಲಾವಿದರನ್ನು ನೆನಪಿಸಿ ಪ್ರಶಸ್ತಿ ನೀಡುತ್ತಿರುವುದು ದೇಗುಲಕ್ಕೆ ಹೆಮ್ಮೆ ಎಂದರಲ್ಲದೆ ಅದೇ ರೀತಿ ಶ್ರೀ ದೇಗುಲ ಕಾರಣಿಕ ಕ್ಷೇತ್ರವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವುದು ಗಮನಾರ್ಹ ಎಂದರು.
ಕೋಟ ವೈಕುಂಠ ಯಕ್ಷಕಿನ್ನರ ಪ್ರಶಸ್ತಿಯನ್ನು ಕೋಟ ವೈಕುಂಠರ ಪುತ್ರ ಉದ್ಯಮಿ ಉಮೇಶ್ ರಾಜ್ ಬೆಂಗಳೂರು ಪ್ರದಾನಿಸಿದರು. ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿಯನ್ನು ಮುಖ್ಯ ಅತಿಥಿ ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಪ್ರದಾನಿಸಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ತಾರಾನಾಥ ಹೊಳ್ಳ , ದೇಗುಲದ ಟ್ರಸ್ಟಿ ಎಂ.ಶಿವ ಪೂಜಾರಿ, ಸುಧಾ ಎ ಪೂಜಾರಿ, ಜ್ಯೋತಿ ಕಾಂಚನ್, ಸುಬ್ರಾಯ ಜೋಗಿ ಉಪಸ್ಥಿತರಿದ್ದರು. ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು ಸ್ವಾಗತಿಸಿ ವಂದಿಸಿದರೆ,ಟ್ರಸ್ಟಿ ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವಾಹ್ನ ದೇಗುಲದಲ್ಲಿ ಮೇಳದ ಗಣೇಶ ಮೂರ್ತಿಗೆ ವಗಣಹೋಮ ಮತ್ತು ಗಣಪತಿಪೂಜೆ ನೆರವೆರಿಸಲಾಯಿತು.
