BlogCrime newsEconomyEducationEntertainmentFashionGovernmentHighlightsHuman storiesLifestyleLocal newsOthersProtestTop StoriesTrending

ಕೋಟ ಥೀಂ ಪಾರ್ಕ್ ನಲ್ಲಿ ಕೆರೆ ಕಬಳಿಕೆ! – ದಾಖಲೆ ಬಹಿರಂಗಪಡಿಸುವಂತೆ ಕೋಟ ನಾಗೇಂದ್ರ ಪುತ್ರನ್ ಆಗ್ರಹ

Aware others:

ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅನಾದಿಕಾಲದಿಂದ ಇದ್ದ ಪರಂಬೋಕು ಕೆರೆಯನ್ನು ಕಬಳಿಸಲಾಗಿದೆ ಎಂದು ಕೋಟ ನಾಗೇಂದ್ರ ಪುತ್ರನ್ ಆರೋಪಿಸಿದ್ದಾರೆ.

ಕಾರಂತರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸುವುದಕ್ಕೆ ಯಾರ ವಿರೋಧವೂ ಇಲ್ಲ,ಆದರೆ ಒಂದು ಕೆರೆ ಅಥವಾ ಸಾರ್ವಜನಿಕ ಜಲಮೂಲದ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳುವ ಮೊದಲು ಕಾನೂನು ಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರಂತರ ಹೆಸರಿಟ್ಟ ಮಾತ್ರಕ್ಕೆ ಕಟ್ಟಡಕ್ಕೆ ಸಾಂಸ್ಕೃತಿಕ ಗೌರವ ಸಿಗಬಹುದು; ಆದರೆ ಅದರಿಂದ ಭೂಮಿಯ ಕಾನೂನುಬದ್ಧ ಸ್ವರೂಪ ಬದಲಾಗುವುದಿಲ್ಲ. ಪರಂಬೊಕು (Poramboke) ಎಂಬುದು ದಕ್ಷಿಣ ಭಾರತದ ಕಂದಾಯ ವ್ಯವಸ್ಥೆಯಲ್ಲಿ ಸಾರ್ವಜನಿಕ ಬಳಕೆ ಅಥವಾ ಖಾಸಗಿ ಸ್ವಾಮ್ಯಕ್ಕೆ ಸೇರದ ಭೂಮೀ ಎಂದು ಸೂಚಿಸಲು ಬಳಸುವ ಪದ.

ಸುಪ್ರೀಂ ಕೋರ್ಟ್ 2011ರಲ್ಲಿ ನೀಡಿದ Jagpal Singh v. State of Punjab ತೀರ್ಪಿನ ಪ್ಯಾರಾಗ್ರಾಫ್ 3ರಲ್ಲಿ ದಕ್ಷಿಣ ಭಾರತದ ಪರಂಬೊಕು ಭೂಮಿಯನ್ನು ಸಾರ್ವಜನಿಕ ಸಮುದಾಯದ ಬಳಕೆಯ ಭೂಮಿ ಎಂದು ಉದಾಹರಣೆಯಾಗಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಕೆರೆ ಎಂದರೆ ಕೇವಲ ಮಳೆ ಬಂದಾಗ ನೀರು ನಿಲ್ಲುವ ಜಾಗವಲ್ಲ. ಅದು ಅಂತರ್ಜಲ ಮರುಪೂರಣದ ವ್ಯವಸ್ಥೆ, ಜಲಚರಗಳ ಬದುಕಿನ ನೆಲೆ, ಪಕ್ಷಿಗಳ ಆಶ್ರಯ ಮತ್ತು ಪ್ರಕೃತಿಯ ನೀರಿನ ಬ್ಯಾಂಕ್ ಎಂಬುದನ್ನು ಸ್ಥಳೀಯ ಸಂಸದರು ಹಾಗೂ ಚುನಾಯಿತಾ ಪ್ರತಿನಿಧಿಗೆ ಜವಾಬ್ದಾರಿ ಬೇಕು.

ಸರ್ಕಾರಿ ಭೂಮಿ ಎಂದರೆ ಯಾರಿಗಾದರೂ ಬೇಕಾದಂತೆ ಬಳಸುವ ಖಾಲಿ ಜಾಗವಲ್ಲ. ಅದು ಸಾರ್ವಜನಿಕರ ಆಸ್ತಿ. ಪ್ರಕೃತಿ, ನದಿ, ಕೆರೆ, ಅರಣ್ಯ ಮತ್ತು ಜೀವಜಂತುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ.ಹೀಗಿರುವಾಗ ಕೆರೆಯ ಬಗ್ಗೆ ಪ್ರಶ್ನೆ ಕೇಳುವ ನಾಗರಿಕರನ್ನು ಅಭಿವೃದ್ಧಿ ವಿರೋಧಿಗಳು ಎಂದು ಕರೆಯುವುದಕ್ಕಿಂತ, ಅವರ ಪ್ರಶ್ನೆಗಳಿಗೆ ದಾಖಲೆಗಳ ಮೂಲಕ ಉತ್ತರಿಸುವುದು ಉತ್ತಮ ಆಡಳಿತದ ಲಕ್ಷಣ ಎಂದು ಅವರು ಹೇಳಿದ್ದಾರೆ.

ಕೋಟ ಶಿವರಾಮ ಕಾರಂತರು ಕೇವಲ ಸಾಹಿತಿಯಲ್ಲ. ಅವರು ಪರಿಸರ, ಪ್ರಕೃತಿ, ಕಲೆ, ಸಾಹಿತ್ಯ, ಯಕ್ಷಗಾನ ಮತ್ತು ಸಾಮಾಜಿಕ ಚಿಂತನೆಗಳ ಪ್ರತೀಕ. ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣವಾಗಿರುವುದು ಒಳ್ಳೆಯ ವಿಚಾರ. ಆದರೆ ಕಾರಂತರ ಪರಿಸರ ಪ್ರಜ್ಞೆಗೆ ವಿರುದ್ಧವಾಗಿ ಏನಾದರೂ ನಡೆದಿದ್ದರೆ ಅದನ್ನು ಪ್ರಶ್ನಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.

ಈ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ದ್ವೇಷವಲ್ಲ. ಯಾವುದೇ ರಾಜಕೀಯ ಪಕ್ಷದ ವಿರುದ್ಧದ ಅಂಧ ವಿರೋಧವೂ ಅಲ್ಲ ಎಂದಿರುವ ಅವರು, ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ನಿಜವಾಗಿಯೂ ಕಾನೂನುಬದ್ಧವಾಗಿ, ಪರಿಸರಕ್ಕೆ ಹಾನಿಯಾಗದಂತೆ ನಿರ್ಮಾಣವಾಗಿದ್ದರೆ ಅದರ ದಾಖಲೆಗಳನ್ನು ಪ್ರಕಟಿಸಬೇಕು. ಜೊತೆಗೆ ಈ ಭೂಮಿ ಮೂಲತಃ ಯಾವ ಉದ್ದೇಶಕ್ಕೆ ಮೀಸಲಾಗಿತ್ತು? ಜಿಲ್ಲಾಧಿಕಾರಿಯ ಅನುಮತಿ ಪಡೆದಿದ್ದಾರೆಯೇ? ಸಂಬಂಧಪಟ್ಟ ಕೆರೆ ಪ್ರಾಧಿಕಾರದ ಅನುಮತಿ ಇದೆಯೇ? ಎಂಬ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!