ಕೋಟೇಶ್ವರ: ಬೈಕ್ ಕಾರು ಡಿಕ್ಕಿ: ಶಿವಮೊಗ್ಗ ಮೂಲದ ಸವಾರ ಸಾವು
ಕುಂದಾಪುರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಕೋಟೇಶ್ವರ-ಹಾಲಾಡಿ ರಸ್ತೆಯ ಕಟ್ಕೆರೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಹುಂಚಾ ಗ್ರಾಮದ ನಿವಾಸಿ ಹರ್ಷ (35) ಎಂದು ಗುರುತಿಸಲಾಗಿದೆ.

ಕಮಲಶಿಲೆಯಲ್ಲಿ ನಡೆದ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹರ್ಷ, ಸಮಾರಂಭ ಮುಗಿದ ಬಳಿಕ ಕೋಟೇಶ್ವರದಲ್ಲಿ ಸ್ನೇಹಿತರನ್ನು ಭೇಟಿ ಮಾಡಿ ಇತರ ಯುವಕರೊಂದಿಗೆ ಎರಡು ಬೈಕ್ಗಳಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಎದುರುಗಿದ್ದ ಕಾರೊಂದರ ಬಲಬದಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಓವರ್ಟೇಕ್ ಮಾಡಿ ಸಾಗಿದ್ದು ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಹರ್ಷ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಸುದ್ದಿ ತಿಳಿದು ಶಾಸಕ ಕಿರಣ್ ಕೊಡ್ಗಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ದುರ್ಘಟನೆಯು ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ, ಸಂಚಾರ ಠಾಣೆಯ ಅನೂಪ್ ನಾಯಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
