ಗ್ಯಾರೆಂಟಿ ವಿರೋಧಿಸುವ ಬಿಜೆಪಿ ಶಾಸಕರು ಸರ್ಕಾರಿ ಹಣದಲ್ಲಿ ಉತ್ಸವ ಮಾಡಿದ್ದರ ಲೆಕ್ಕ ನೀಡಲಿ – ಕೋಟ ನಾಗೇಂದ್ರ ಪುತ್ರನ್ ಕಿಡಿ
ಕೋಟ: ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರುಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಯ ಭಯ ಆರಂಭವಾಗಿದ್ದು, ಫಲಾನುಭವಿಗಳ ಸಮಾವೇಶಕ್ಕೆ ಗ್ರಾಮ ಪಂಚಾಯತ್ ಅನುದಾನ ಬಳಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದ. ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಕಾರ್ಕಳ ಉತ್ಸವ, ಬೈಂದೂರು ಉತ್ಸವ, ಕಾಪು ಬೀಚ್ ಉತ್ಸವ, ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ ಸೇರಿದಂತೆ ನಡೆದ ಅನೇಕ ಉತ್ಸವಗಳ ಲೆಕ್ಕ ನೀಡಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ವೆಚ್ಚವಾಗಿರುವ ಕೋಟ್ಯಂತರ ರೂಪಾಯಿ ಅನುದಾನ ಎಲ್ಲಿಂದ ಬಂದಿತ್ತು? ಯಾವ ಇಲಾಖೆಯಿಂದ ಎಷ್ಟು ಹಣ ಬಿಡುಗಡೆಯಾಗಿತ್ತು? ಸಾರ್ವಜನಿಕ ಹಣ ಬಳಕೆಯಾಗಿದ್ದರೆ ಅದರ ಬಗ್ಗೆ ಬಿಜೆಪಿ ಶಾಸಕರು ಸ್ಪಷ್ಟನೆ ನೀಡಲಿ ಎಂದಿರುವ ಅವರು, ಸಾರ್ವಜನಿಕ ಹಣದಲ್ಲಿ ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುವಾಗ ಅಭಿವೃದ್ಧಿ ಎಂದು ಸಮರ್ಥಿಸಿಕೊಳ್ಳುವ ಬಿಜೆಪಿಯವರಿಗೆ, ಬಡವರು, ಮಹಿಳೆಯರು, ರೈತರು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾತ್ರ ರಾಜಕೀಯ ಕಾರ್ಯಕ್ರಮವಾಗಿ ಕಾಣುತ್ತಿರುವುದು ಅವರ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಬಿಜೆಪಿಯವರು ಮೊದಲು ತಮ್ಮ ಆಡಳಿತದ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಖರ್ಚು-ವೆಚ್ಚಗಳ ಲೆಕ್ಕವನ್ನು ಜನರ ಮುಂದಿಡಲಿ. ನಂತರ ಗ್ಯಾರಂಟಿ ಸಮಾವೇಶದ ಬಗ್ಗೆ ಮಾತನಾಡಲಿ. ಜನರ ತೆರಿಗೆ ಹಣ ಜನರಿಗಾಗಿಯೇ ಬಳಕೆಯಾಗಬೇಕು. ಅದು ಉತ್ಸವವಾಗಿರಲಿ, ಅಭಿವೃದ್ಧಿ ಕಾಮಗಾರಿಯಾಗಿರಲಿ ಅಥವಾ ಗ್ಯಾರಂಟಿ ಫಲಾನುಭವಿಗಳ ಸಮಾವೇಶವಾಗಿರಲಿ, ಎಲ್ಲದಕ್ಕೂ ಪಾರದರ್ಶಕತೆ ಇರಬೇಕು ಎಂದಿರುವ ನಾಗೇಂದ್ರ ಪುತ್ರನ್, ಬಡವರ ಬದುಕಿಗೆ ಆಸರೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜಕೀಯ ದ್ವೇಷದಿಂದ ಟೀಕೆ ಮಾಡುವುದನ್ನು ಬಿಜೆಪಿ ಶಾಸಕರು ನಿಲ್ಲಿಸಲಿ ಎಂದು ನಾಗೇಂದ್ರ ಪುತ್ರನ್ ಕಿಡಿಕಾರಿದ್ದಾರೆ.
