ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿ ಸಂಧ್ಯಾ ಕೆ.ಕೆ ಅವರಿಗೆ ರಾಜ್ಯಮಟ್ಟದ ಎನ್‌ಎಸ್ಎಸ್ ಪ್ರಶಸ್ತಿ
ಕುಂದಾಪುರ: ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿ ಸಂಧ್ಯಾ ಕೆ.ಕೆ ಅವರು ರಾಜ್ಯಮಟ್ಟದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಸಂಧ್ಯಾ ಕಾವೇರಿ ತಿಳಿಸಿದ್ದಾರೆ.

ಬೆಂಗಳೂರಿನ ರಾಜ್ಯ ಎನ್‌ಎಸ್‌ಎಸ್ ಕೋಶ ಪ್ರಕಟಿಸಿರುವ 2024ನೇ ಸಾಲಿನ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿಗೆ ಪ್ರಸ್ತುತ ಮಾಹೆ ಯೂನಿವರ್ಸಿಟಿಯಲ್ಲಿ ಇಂಗ್ಲೀಷ್ ನಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಹೊಸನಗರದ ಕೃಷ್ಣ ಮೊಗವೀರ ಹಾಗೂ ಜಯಂತಿ ಮೊಗವೀರ ದಂಪತಿಗಳ ಪುತ್ರಿ ಸಂಧ್ಯಾ ಕೆ.ಕೆ. ಭಾಜನರಾಗಿದ್ದಾರೆ.
ಇವರ ಸಾಧನೆಗೆ ಮಾನಸ ಟ್ರಸ್ಟ್ ನಿರ್ದೇಶಕಿ ಡಾ. ರಜನಿ ಪೈ ಅವರು ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಸುಕೀರ್ತಿ ಮತ್ತು ಮೋಹನ ಕುಮಾರ್ ಅಭಿನಂದಿಸಿದ್ದಾರೆ. ಶೈಕ್ಷಣಿಕ ನಿರ್ದೇಶಕರಾದ ಪ್ರೀತಿ ಶಾನುಭಾಗ್, ವಾಮನ ಶಾನುಭಾಗ್, ರಾಜೇಂದ್ರ ಚೆನ್ನಿ ಹಾಗೂ ಆಡಳಿತಾಧಿಕಾರಿ ರಾಮಚಂದ್ರ ಬಾಳಿಗೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
2024ರಲ್ಲಿ ನಡೆದ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಂಧ್ಯಾ ಅವರು ಕುವೆಂಪು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕ ಡಾ. ಶುಭ ಮರವಂತೆ ಅವರ ಪ್ರೋತ್ಸಾಹ ಹಾಗೂ ಕಾಲೇಜಿನ ಎನ್‌ಎಸ್‌ಎಸ್ ಘಟಕದ ತರಬೇತಿ ಮತ್ತು ಕಾರ್ಯಕ್ರಮಗಳು ಸ್ವಯಂಸೇವೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ಸಂಧ್ಯಾ ತಿಳಿಸಿದ್ದಾರೆ.
ಪೋಷಕರು, ಎನ್‌ಎಸ್‌ಎಸ್ ಕಾರ್ಯಕ್ರಮಾದಿ ಕಾರಿಗಳು, ಉಪನ್ಯಾಸಕರು ಹಾಗೂ ಸಹಪಾಠಿಗಳ ಬೆಂಬಲವನ್ನು ಸ್ಮರಿಸಿರುವ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
