ಕೋಟೇಶ್ವರ: ಕೋಟಿತೀರ್ಥ ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಕುಂದಾಪುರ: ಕೋಟೇಶ್ವರದ ಪ್ರಸಿದ್ಧ ಕೋಟಿತೀರ್ಥ ಪುಷ್ಕರಣಿಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಗ್ಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕೋಟೇಶ್ವರ ಸಮೀಪದ ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ (37) ಮೃತ ಯುವಕ.

ಕುಂದಾಪುರದ ಹೆಂಚಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪದ್ಮನಾಭ ಕಳೆದ ನಾಲ್ಕು ತಿಂಗಳಿನಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಮಂಗಳವಾರ ದಿನಾಂಕ 22ರಂದು ಬೆಳಗ್ಗೆ ಮನೆಯಿಂದ ಹೊರಟಿದ್ದ ಅವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಮನೆಯವರು ಹುಡುಕಾಟ ನಡೆಸಿದಾಗ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಸಮೀಪ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಬಳಿಕ ಸುತ್ತಲೂ ಹುಡುಕಾಡಿದಾಗ ಕೋಟಿತೀರ್ಥ ಪುಷ್ಕರಣಿಯ ಪೂರ್ವ ಭಾಗದ ಮೆಟ್ಟಿಲಿನ ಮೇಲೆ ಪದ್ಮನಾಭ ಅವರ ಚಪ್ಪಲಿ ಹಾಗೂ ಟೋಪಿ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ( ಬುಧವಾರ) ಬೆಳಗ್ಗೆಯಿಂದ ಪುಷ್ಕರಣಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಪ್ರತಿದಿನದಂತೆ ಕೋಟಿತೀರ್ಥದಲ್ಲಿ ಈಜಲು ಬಂದ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಮಂಜ ಸೇರಿದಂತೆ ಸ್ಥಳೀಯ ಈಜುಗಾರರು ಬೋಟ್ ಸಹಾಯದಿಂದ ನೀರಿನಲ್ಲಿ ಶೋಧ ನಡೆಸಿದ್ದಾರೆ. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ನೀರಿನಲ್ಲಿ ಪದ್ಮನಾಭ ಆಚಾರ್ಯ ಮೃತದೇಹ ಪತ್ತೆಯಾಗಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ತಂಡ ಸ್ಥಳೀಯ ಈಜುಗಾರರ ನೆರವಿನೊಂದಿಗೆ ನೀರಿಗಿಳಿದು ಮೃತದೇಹವನ್ನು ಮೇಲಕ್ಕೆತ್ತಿದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
