ಆಟೋ ಚಾಲಕರ ಆರೋಗ್ಯ ಕಾಪಾಡುವುದು ಸಮಾಜದ ಆರೋಗ್ಯ ಕಾಪಾಡಿದಂತೆ : ತಾಲೂಕು ಆರೋಗ್ಯಾಧಿಕಾರಿ ಕೆ. ಪ್ರೇಮಾನಂದ
ಕುಂದಾಪುರ: ರೋಟರಿ ಕಲಾ ಮಂದಿರದಲ್ಲಿ ಭಾನುವಾರ ಭಾರತೀಯ ಆಟೋರಿಕ್ಷಾ ಮಜ್ದೂರ್ ಸಂಘದ 20ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಕೆ. ಪ್ರೇಮಾನಂದ ಅವರು, ದಿನ ರಾತ್ರಿ ಎನ್ನದೇ ದುಡಿಯುವ ಆಟೋರಿಕ್ಷಾ ಚಾಲಕರು ಸಮಾಜದ ಜೀವನಾಡಿ. ಅವರ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಪ್ರಯಾಣಿಕರ ಸುರಕ್ಷತೆ ಮತ್ತು ಕುಟುಂಬದ ನೆಮ್ಮದಿ ಸಾಧ್ಯ. ಇಂತಹ ಉಚಿತ ಆರೋಗ್ಯ ಶಿಬಿರಗಳು ಕೇವಲ ತಪಾಸಣೆಯಲ್ಲ, ಜಾಗೃತಿ ಮೂಡಿಸುವ ಕೆಲಸ. ಸಂಘದ 20 ವರ್ಷಗಳ ಸೇವೆ ಶ್ಲಾಘನೀಯ” ಎಂದು ಹೇಳಿದರು.

ಅನ್ನಪೂರ್ಣೇಶ್ವರಿ ಸೇವಾ ಬಂಧು ಟ್ರಸ್ಟ್ ಪ್ರಮುಖರಾದ ಕೆ.ಆರ್. ನಾಯ್ಕ್ ಕಾರ್ಯಕ್ರಮದ ಬಗ್ಗೆ ಅನಿಸಿಕೆಯೇ ಬಗ್ಗೆ ಮಾತನಾಡಿದ ಅವರು “ಸೇವಾ ಮನೋಭಾವದಿಂದ ನಡೆಯುವ ಸಂಘಟನೆಗೆ ಸಮಾಜದಲ್ಲಿ ದೊಡ್ಡ ಶಕ್ತಿ ಇದೆ. ಆಟೋ ಚಾಲಕರ ಸಂಘ ಸಮಾಜಮುಖಿ ಕೆಲಸ ಮಾಡುತ್ತಿರುವುದು ಮಾದರಿ” ಎಂದರು.
ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆಯ ಪ್ರಮುಖರಾದ ಶಂಕರ್ ಶೆಟ್ಟಿ ಮಾತನಾಡಿ “ಚಾಲಕರಿಗೆ ಕಣ್ಣುಗಳೇ ಮುಖ್ಯ ಆಸ್ತಿ. ನಿಯಮಿತ ಕಣ್ಣಿನ ತಪಾಸಣೆ ಅಪಘಾತಗಳನ್ನು ತಡೆಯುತ್ತದೆ. ನಮ್ಮ ಆಸ್ಪತ್ರೆ ಸದಾ ನಿಮ್ಮ ಸೇವೆಗೆ ಸಿದ್ಧವಿದೆ” ಎಂದರು. ಕಣ್ಣಿನ ತಜ್ಞ ವೈದ್ಯರಾದ ಡಾ. ರಕ್ಷಣ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ”ಧೂಳು, ಬಿಸಿಲು ಮತ್ತು ರಾತ್ರಿ ಚಾಲನೆಯಿಂದ ಕಣ್ಣಿನ ಸಮಸ್ಯೆ ಹೆಚ್ಚು. ಪ್ರತಿ 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಟೋರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಸುರೇಶ್ ಪುತ್ರನ್ ಅವರು ಮಾತನಾಡಿ, “20 ವರ್ಷಗಳ ನಮ್ಮ ಸಂಘದ ಪಯಣ ಚಾಲಕರ ಏಳಿಗೆಗಾಗಿ. ಆರೋಗ್ಯ ಶಿಬಿರದ ಜೊತೆಗೆ ನಮ್ಮ ಸದಸ್ಯರ ಕಷ್ಟಕ್ಕೆ ನೆರವಾಗುವುದು ನಮ್ಮ ಜವಾಬ್ದಾರಿ” ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಅನೇಕ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ತ್ರಾಸಿಯ ಉದಯ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಸಂಕಷ್ಟದಲ್ಲಿರುವ ಆಟೋರಿಕ್ಷಾ ಚಾಲಕರಿಗೆ ವೈದ್ಯಕೀಯ ವೆಚ್ಚದ ನೆರವನ್ನು ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಉಪನ್ಯಾಸಕರದ ರಾಜೇಶ್ ಅಡಿಗ ಇದ್ದರು
ಸದ್ರಿ ಈ ಕಾರ್ಯಕ್ರಮದಲ್ಲಿ ಬಿಎಂಎಸ್ ಕಾರ್ಯದರ್ಶಿ ಶೇಖರ್ ಮೊಗವೀರ, ಬಿ.ಎಂ.ಎಸ್ ಸ್ಥಾಪಕ ಅಧ್ಯಕ್ಷ ಶಂಕರ ಅಂಕದಕಟ್ಟೆ, ನಿಕಟ ಪೂರ್ವ ಅಧ್ಯಕ್ಷ ಸತೀಶ್ ಕೆ.ಟಿ. ಪ್ರಮುಖರಾದ ಸುಧೀರ್ ಕೆ. ಎಸ್., ರಾಜೇಶ್ ಕಾವೇರಿ, ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಕೃಷ್ಣಮೂರ್ತಿ, ಪುರಸಭಾ ಮಾಜಿ ಸದಸ್ಯ ಸಂತೋಷ್ ಶೆಟ್ಟಿ,, ಸೇರಿದಂತೆ ಸಂಘದ ಪದಾಧಿಕಾರಿಗಳು, ನೂರಾರು ಆಟೋ ಚಾಲಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುರೇಂದ್ರ ಕಾಂಚನ್ ಸಂಗಮ್ ನಿರೂಪಿಸಿದರು. ಅಶೋಕ್ ಕೆರೆಕಟ್ಟೆ ಸ್ವಾಗತಿಸಿದರು. ಅಶೋಕ್ ಪೂಜಾರಿ ಕೋಡಿ ವಂದಿಸಿದರು.
