BlogCulturalEconomyEntertainmentFashionHighlightsHuman storiesLifestyleLocal newsOthersReligionState newsTop StoriesTrending

ಬಸ್ರೂರು: ಸೆ. 19ರಂದು ಶ್ರೀ ತುಳುವೇಶ್ವರನಿಗೆ ದ್ವಾದಶ ಜ್ಯೋತಿರ್ಲಿಂಗ ತೀರ್ಥಾಭಿಷೇಕ – ಡಾ. ರಾಜೇಶ್ ಆಳ್ವಾ

Aware others:

ಬಸ್ರೂರು: ಬಸ್ರೂರು ಶ್ರೀ ತುಳುವೇಶ್ವರ ದೇವಸ್ಥಾನದ ತುಳುವೇಶ್ವರಿ ಮೂಲದೇವಿಯ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಅಂಗವಾಗಿ ಸೆಪ್ಟೆಂಬರ್ 19 ಮತ್ತಿ 20ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸೆಪ್ಟೆಂಬರ್ 19ರಂದು ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಶ್ರೀ ತುಳುವೇಶ್ವರನಿಗೆ ದ್ವಾದಶ ಜ್ಯೋತಿರ್ಲಿಂಗಗಳ ಪವಿತ್ರ ತೀರ್ಥಜಲದಿಂದ ವಿಶೇಷ ತೀರ್ಥಾಭಿಷೇಕ ನಡೆಯಲಿದೆ ಎಂದು ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ತಿಳಿಸಿದ್ದಾರೆ.

ತುಳುವರ್ಲ್ಡ್ ಫೌಂಡೇಶನ್ ಸದಸ್ಯರಾದ ನಿತಿನ್ ಪೂಜಾರಿ, ಅಜಯ್ ದೇವಾಡಿಗ, ರಿತೇಶ್ ಹಾಗೂ ಬಸಂತ್ ಎಂಬ ನಾಲ್ವರು ಯುವಕರು ಸುಮಾರು 48 ದಿನಗಳ ಕಾಲ ತಮ್ಮದೇ ವಾಹನದಲ್ಲಿ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳ ಯಾತ್ರೆ ಕೈಗೊಂಡು, ಎಲ್ಲಾ ಜ್ಯೋತಿರ್ಲಿಂಗಗಳ ದರ್ಶನ ಪಡೆದು ತಂದಿರುವ ಪವಿತ್ರ ತೀರ್ಥಜಲವನ್ನು ನೀಲೇಶ್ವರದ ತಂತ್ರಿಗಳಾದ ಅರವತ್ತ್ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳು ಶ್ರೀ ತುಳುವೇಶ್ವರನಿಗೆ ಅಭಿಷೇಕ ಮಾಡಿದ ಬಳಿಕ ತುಳುವೇಶ್ವರಿ ಮೂಲದೇವಿಯ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯಲಿದೆ.

ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಬೆಳವಣಿಗೆಯೂ ಮಹತ್ವ ಪಡೆದಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ, ಅಂಜಾರು ರಾಮಣ್ಣ ಹೆಗ್ಡೆ ಹಾಗೂ ಎಸ್.ಯು. ಪಣಿಯಾಡಿ ಅವರ ತುಳುವ ಚಳುವಳಿಯ ಶತಮಾನೋತ್ಸವ, ಸೆಪ್ಟೆಂಬರ್ 23ರಿಂದ ನಡೆಯಲಿರುವ ತುಳುವ ಮಹಾಸಭೆಯ 99ನೇ ವರ್ಷಾಚರಣೆ ಹಾಗೂ 19 ರಾಷ್ಟ್ರಗಳಲ್ಲಿ ತುಳುವ ಮಹಾಸಭೆಯ ಕಾರ್ಯವ್ಯಾಪ್ತಿ ವಿಸ್ತರಿಸಿರುವುದು ತುಳು ನುಡಿ ಮತ್ತು ಸಂಸ್ಕೃತಿಯ ಪುನರ್‌ವೈಭವದ ವ್ಯಾಪ್ತಿಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಬಸ್ರೂರು ಶ್ರೀ ತುಳುವೇಶ್ವರ–ತುಳುವೇಶ್ವರಿ ಸಾನಿಧ್ಯದ ಮಹತ್ವವೂ ಮತ್ತಷ್ಟು ಗಮನ ಸೆಳೆಯುತ್ತಿದೆ.

ಸಮಸ್ತ ತುಳುನಾಡಿನ ಜನರು ಹಾಗೂ ಶ್ರೀ ತುಳುವೇಶ್ವರ–ತುಳುವೇಶ್ವರಿ ಭಕ್ತರು ಸೆಪ್ಟೆಂಬರ್ 19ರಂದು ಬಸ್ರೂರಿಗೆ ಆಗಮಿಸಿ ದ್ವಾದಶ ಜ್ಯೋತಿರ್ಲಿಂಗ ತೀರ್ಥಾಭಿಷೇಕದಲ್ಲಿ ಹಾಗೂ ನಂತರ ನಡೆಯುವ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಭಾಗವಹಿಸುವಂತೆ ಡಾ. ರಾಜೇಶ್ ಆಳ್ವಾ ವಿನಂತಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!