ಸಾಲಿಗ್ರಾಮ: ದೇವರಿಚ್ಛೆ ಪೂರೈಸುವ ಕಾರ್ಯಕ್ಕೆ ಮಧ್ಯವರ್ತಿಗಳಾದಾಗ ಭಗವಂತ ಒಲಿಯುತ್ತಾನೆ – ಉದ್ಯಮಿ ಅವಿನಾಶ್ ಶೆಟ್ಟಿ | ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಹದ್ದಿನಬೆಟ್ಟು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವದ ಪ್ರಶಸ್ತಿ ಪ್ರದಾನ
ಕೋಟ: ಕೊಡುವುದು ಭಗವಂತನ ಇಚ್ಚೆ. ಅದನ್ನು ಪೂರೈಸುವ ಮಧ್ಯವರ್ತಿಯಾಗಿ ನನ್ನನ್ನು ಬಳಸಿಕೊಳ್ಳುತ್ತಿದ್ದಾನೆ. ದೇವರ ಇಚ್ಛೆ ಪೂರೈಸುವ ಮಧ್ಯವರ್ತಿಗಳಾದಾಗ ದೇವರ ಕೃಪೆ ದೊರೆಯುತ್ತದೆ ಎಂದು ನಂಬಿದ್ದೇನೆ. ಆ ನಿಟ್ಟಿನಲ್ಲಿ ಸಾನ್ವಿ ಫೌಂಡೇಶನ್ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವುದರ ಜತೆಗೆ ಸಾಮಾಜಿಕ ಕಾರ್ಯದೊಂದಿಗೆ ಗಣೇಶೋತ್ಸವ ಕಾರ್ಯಕ್ರಮ ಹದ್ದಿನಬೆಟ್ಟಿನಲ್ಲಿ ಸರ್ವಧರ್ಮ ಸಮನ್ವಯ ಕೇಂದ್ರವಾಗಿ ರೂಪುಗೊಂಡು ಸಾಮರಸ್ಯ ಜೀವನಕ್ಕೆ ಮುನ್ನುಡಿ ಬರೆಯುವ ಪ್ರಯತ್ನ ನಡೆಸುತ್ತಿದೆ ಎಂದು ಹದ್ದಿನಬೆಟ್ಟು- ಯಡಬೆಟ್ಟು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಅಧ್ಯಕ್ಷ, ಬೆಂಗಳೂರಿನ ಸಾನ್ವಿ ಗ್ರೂಪ್ ಮಾಲಕ ಅವಿನಾಶ್ ಶೆಟ್ಟಿ ಗುಂಡ್ಮಿ ಹೇಳಿದ್ದಾರೆ.


ಅವರು ಸೋಮವಾರ ಹದ್ದಿನಬೆಟ್ಟು-ಯಡಬೆಟ್ಟು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ವತಿಯಿಂದ ಆಯೋಜಿಸಲಾದ 29ನೇ ವರ್ಷದ ಶ್ರೀ ಗಣೇಶ ಆರಾಧನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಐವತ್ತು ಸಾವಿರ ರೂಪಾಯಿ ನಗದು ಪುರಸ್ಕಾರದೊಂದಿಗೆ ಶ್ರೀ ಗಣೇಶ ಆರಾಧನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ಬೀಕರಿಸಿ ಮಾತನಾಡಿದ ಅವರು, ನಮ್ಮೂರಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಇಚ್ಛೆಯಿಂದ ಕಿತ್ತಳೆ ಮಾರಿ ಶಾಲೆ ಕಟ್ಟದ್ದೇನೆ ಆಗಿನ ಶಾಸಕ ಯು.ಟಿ ಫರೀದ್ ಸೇರಿದಂತೆ ಅನೇಕ ಜನರು ಕೈಜೋಡಿಸಿದ್ದರು. ಇಂದು ಹಲವು ಪ್ರಶಸ್ತಿಗಳು ಲಭಿಸುತ್ತಿವೆ. ಆದರೆ ಇನ್ನಷಟ್ಉ ಶಿಕ್ಷಣ ಕ್ಷೇತ್ರದಲ್ಲಿ ನಾನು ಸಾಧಿಸಬೇಕಿದೆ ಎಂದರು.




ಯುವ ಕಲಾವಿದ ನಿರಜ್ ತಯಾರಿಸಿದ ಸ್ಟ್ರಿಂಗ್ ಆರ್ಟ್ ಮೂಲಕ ರಚಿಸಿದ ಹರೇಕಳ ಹಾಜಬ್ಬರ ಭಾವಚಿತ್ರವನ್ನು ಹಸ್ತಾಂತರಿಸಲಾಯಿತು. ಸಾನ್ವಿ ಗ್ರೂಪ್ ಅವಿನಾಶ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಶೈಕ್ಷಣಿಕ ದತ್ತುಸ್ವೀಕಾರ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯ 30 ವಿದ್ಯಾರ್ಥಿಗಳಿಗೆ 5 ಸಾವಿರ ರೂ.ಗಳಂತೆ ವಿದ್ಯಾರ್ಥಿ ವೇತನ ವಿತರಣೆ,ಎರಡು ಸ್ಥಳೀಯ ಸರಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಒಂದು ವರ್ಷದ ಮಾಸಿಕ ಗೌರವ ವೇತನ, 6 ಜನ ಅನಾರೋಗ್ಯ ಪೀಡಿತರಿಗೆ ಸಹಾಯನಿಧಿ ವಿತರಣೆ ಜತೆಗೆ ಹಲವು ಸಾಮಾಜಿಕ ಕಾರ್ಯಗಳು ಈ ವೇದಿಕೆಯಲ್ಲಿ ನೀಡಲಾಯಿತು.





ಉತ್ಸವದ ಅಂಗವಾಗಿ ಹಮ್ಮಿಕೊಂಡ ಕ್ರೀಡಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಬ್ರಹ್ಮಾವರ ಎಸ್ ಎಂಎಸ್ ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ರಥಶಿಲ್ಪಿ ರಾಜಗೋಪಾಲ್ ಆಚಾರ್ಯ ಉಪಸ್ಥಿತರಿದ್ದರು.ಸಮಿತಿ ಕಾರ್ಯದರ್ಶಿ ಚಂದ್ರ ಮೊಗವೀರ ಸ್ವಾಗತಿಸಿ ಬಹುಮಾನ ಪತ್ರವಾಚಿಸಿ ವಂದಿಸಿದರು. ಸಮಿತಿಯ ಸೂರಜ್ ವಿಧ್ಯಾರ್ಥಿವೇತನದ ಪಟ್ಟಿ ವಾಚಿಸಿದರು. ಅಶೋಕ್ ಭಂಡಾರಿ ಲೆಕ್ಕಪತ್ರ ವಾಚಿಸಿದರು. ಸಮಿತಿಯ ಗೌರವಾಧ್ಯಕ್ಷ ರಾಮದೇವ ಐತಾಳ್ ಪ್ರಶಸ್ತಿ ಪತ್ರ ವಾಚಿಸಿ ನಿರೂಪಿಸಿದರು.
