ಕೋಟ: ಹದ್ದಿನಬೆಟ್ಟು ಶ್ರೀ ಗಣೇಶ ಆರಾಧನೋತ್ಸ ವ ಪುರಸ್ಕಾರಕ್ಕೆ ಪದ್ಮಶ್ರೀ ಹರೇಕಳ ಹಾಜಬ್ಬ ಆಯ್ಕೆ
ಕೋಟ: ಇಲ್ಲಿನ ಗುಂಡ್ಮಿ ಸಮೀಪದ ಹದ್ದಿನಬೆಟ್ಟು – ಯಡಬೆಟ್ಟು ಸಾಮೂಹಿಕ ಶ್ರೀ ಗಣೇಶೋತ್ಸವ ಆರಾಧನೋತ್ಸವ ಸಮಿತಿ ಆಶ್ರಯದಲ್ಲಿ ಕೊಡಮಾಡುವ ಆರಾಧನೋತ್ಸವ ಪುರಸ್ಕಾರಕ್ಕೆ ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಆಯ್ಕೆಯಾಗಿದ್ದಾರೆ ಎಂದು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ ಗುಂಡ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸೆಪ್ಟೆಂಬರ್ 14ರಂದು ಸಂಜೆ 7 ಗಂಟೆಗೆ ಹದ್ದಿನಬೆಟ್ಟು ಪರಿಸರದಲ್ಲಿ ನಡೆಯುವ 29 ನೇ ವರ್ಷದ ಶ್ರೀ ಗಣೇಶ ಆರಾಧನೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಹದ್ದಿನಬೆಟ್ಟು ಆರಾಧನೋತ್ಸವ ಪುರಸ್ಕಾರ ಆಯ್ಕೆಗೊಳಿಸಲಾಗಿ ಈ ಪುರಸ್ಕಾರ ಐವತ್ತು ಸಾವಿರ ರೂಪಾಯಿಗಳ ನಗದು ಒಳಗೊಂಡ ಶಾಶ್ವತ ಫಲಕ ನೀಡಿ ಗೌರವಿಸಲಾಗುತ್ತದೆ.
ಇದೇ ಸಂದರ್ಭ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 30 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ವಿತರಣೆ, ಎರಡು ಸ್ಥಳೀಯ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಒಂದು ವರ್ಷದ ಮಾಸಿಕ ಗೌರವ ವೇತನ, ಆರು ಜನ ಅನಾರೋಗ್ಯ ಪೀಡಿತರಿಗೆ ಸಹಾಯನಿಧಿ ವಿತರಣೆ ಜತೆಗೆ ಹಲವು ಸಾಮಾಜಿಕ ಕಾರ್ಯಗಳು ನಡೆಯಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
