BlogEducationEntertainmentFashionHighlightsHuman storiesLifestyleLocal newsOthersPoliticsProtestState newsTop StoriesTrending

ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಒಗ್ಗಟ್ಟಿನ ಹಕ್ಕೊತ್ತಾಯ | ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡ ಪೀಠಕ್ಕೆ ಆಗ್ರಹ

Aware others:

ಕುಂದಾಪುರ: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಒಗ್ಗಟ್ಟಿನ ಹಕ್ಕೊತ್ತಾಯವನ್ನು ಕುಂದಾಪುರ ಬಾರ್‌ ಅಸೋಸಿಯೇಷನ್‌ ವತಿಯಿಂದ ಹಮ್ಮಿಕೊಳ್ಳಲಾಯಿತು.

ಜಸ್ವಂತ್ ಸಿಂಗ್ ಆಯೋಗದ ವರದಿಯ ಆಧಾರದಲ್ಲಿ ಭೌಗೋಳಿಕವಾಗಿ ನ್ಯಾಯ ಸಿಗಬೇಕು. ಹೈಕೋರ್ಟ್‌ ಪೀಠಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಮ್ಮ ಜಿಲ್ಲೆಗಳು ಸಮರ್ಥವಾಗಿವೆ. ಹೈಕೋರ್ಟ್‌ ಸಂಬಂಧಿತ ಕೆಲಸಗಳಿಗಾಗಿ ಬೆಂಗಳೂರಿಗೆ ಪದೇಪದೇ ತೆರಳಬೇಕಾಗಿರುವುದು ಜನರಿಗೆ ಸಮಯ, ಪ್ರಯಾಣ, ವಸತಿ ಸೇರಿದಂತೆ ಅನೇಕ ರೀತಿಯ ಆರ್ಥಿಕ ಹೊರೆಯುಂಟಾಗುತ್ತಿದ್ದು, ಬಡವರು, ಮಧ್ಯಮ ವರ್ಗದವರಿಗೆ ಇದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ನ್ಯಾಯದಾನವನ್ನು ವಿಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೈಕೋರ್ಟ್‌ ಪೀಠ ಹೋರಾಟ ಸಮಿತಿಯ ಮುಖಂಡ ಪ್ರೇಮ್‌ ಪ್ರಸಾದ್ ಶೆಟ್ಟಿ ಹೇಳಿದರು.

ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಕಳೆದ 10–15 ವರ್ಷಗಳಿಂದ ಇದೆ. ಮೊದಲ ಹಂತದಲ್ಲಿ ಮಂಗಳೂರಿಗೆ ಸಂಚಾರಿ ಪೀಠ ತರಬೇಕು. ನಂತರ ಅದನ್ನು ಖಾಯಂ ಪೀಠವಾಗಿ ಪರಿವರ್ತಿಸಬೇಕು ಎನ್ನುವ ಆಗ್ರಹ ಕೇಳಿ ಬಂತು. ಹೈಕೋರ್ಟ್‌ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ಕೇಂದ್ರ ಸರ್ಕಾರದ ಪಾತ್ರವಿದೆ. 1985ರ ನಿವೃತ್ತ ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಭೌಗೋಳಿಕವಾಗಿ ಜನರಿಗೆ ನ್ಯಾಯದಾನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕರಾವಳಿ ಭಾಗವು ಬೆಂಗಳೂರಿನಿಂದ ಸುಮಾರು 350ರಿಂದ 500 ಕಿ.ಮೀ. ದೂರದಲ್ಲಿದೆ. ಧಾರವಾಡ ಹಾಗೂ ಕಲಬುರಗಿಯಲ್ಲಿ ಹೈಕೋರ್ಟ್‌ ಪೀಠ ರಚನೆಗೆ ನೀಡಿದ ಆದ್ಯತೆಯಲ್ಲೇ ಕರಾವಳಿ ಭಾಗಕ್ಕೂ ಪೀಠ ರಚನೆಗೆ ಆದ್ಯತೆ ನೀಡಬೇಕು. ಕರಾವಳಿ ಭಾಗದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಶಾಸಕರು ಹೈಕೋರ್ಟ್‌ ಪೀಠದ ಬೇಡಿಕೆಯನ್ನು ಪ್ರಸ್ತಾಪಿಸಬೇಕು ಎಂದು ತೀರ್ಮಾನಿಸಲಾಯಿತು.

ಹೈಕೋರ್ಟ್‌ನಲ್ಲಿ ಸುಮಾರು 2.5 ಲಕ್ಷ ಪ್ರಕರಣಗಳು ಬಾಕಿ ಇದ್ದು, ಕರಾವಳಿಯ ನಾಲ್ಕು ಜಿಲ್ಲೆಗಳಿಂದ ಸುಮಾರು 3ರಿಂದ 4‌ಸಾವಿರ ಪ್ರಕರಣಗಳು ಹೈಕೋರ್ಟ್‌ಗೆ ದಾಖಲಾಗುತ್ತವೆ.  ಅಳಿಯಸಂತಾನ ಪದ್ಧತಿಯ ಕಾನೂನು, ಕರಾವಳಿ ನಿಯಂತ್ರಣ ವಲಯ (CRZ) ಸೇರಿದಂತೆ ಸ್ಥಳೀಯ ವೈಶಿಷ್ಟ್ಯ ಹೊಂದಿರುವ ಕಾನೂನು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಹೈಕೋರ್ಟ್‌ ಪೀಠದ ಅಗತ್ಯವಿದೆ. ಪೀಠ ಸ್ಥಾಪನೆಯಿಂದ ಜನರಿಗೆ ಶೀಘ್ರ ನ್ಯಾಯದ ಜೊತೆಗೆ ಕಾನೂನು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಹಾಗೂ ಪ್ರಾಯೋಗಿಕ ಕಾನೂನು ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶ ಸಿಗಲಿದೆ.

ವಕೀಲರು, ಜನಸಾಮಾನ್ಯರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಹಕ್ಕೊತ್ತಾಯ ಮಂಡಿಸಬೇಕು. ಸೆಪ್ಟಂಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವಂತೆ ಪ್ರಯತ್ನಿಸಬೇಕು. ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯ ಬೇಡಿಕೆ ಕುಂದಾಪುರಕ್ಕೆ ಮಾತ್ರ ಸೀಮಿತವಾಗದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಒಗ್ಗಟ್ಟಿನ ಹಕ್ಕೊತ್ತಾಯವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಸಂಘಟಿತ ಹೋರಾಟಕ್ಕೆ ತೀರ್ಮಾನಿಸಲಾಯಿತು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕರ್ನಾಟಕ ರಾಜ್ಯ ಬಾರ್‌ ಕೌನ್ಸಿಲ್‌ ಸದಸ್ಯೆ ಶ್ಯಾಮಲಾ ಭಂಡಾರಿ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ, ಲಯನ್ಸ್‌ನ ರಾಜೀವ್ ಕೋಟ್ಯಾನ್, ಕಾಂಗ್ರೆಸ್‌ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಕಲಾಕ್ಷೇತ್ರದ ಕಿಶೋರ್ ಕುಮಾರ್, ಡಾ. ಉಮೇಶ್ ಪುತ್ರನ್, ಹಿರಿಯ ಪತ್ರಕರ್ತರಾದ ಯು.ಎಸ್. ಶೆಣೈ, ಕೆ.ಸಿ. ರಾಜೇಶ್ ಸೇರಿದಂತೆ ಹಲವು ಕ್ಷೇತ್ರಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 

ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸಂಚಾಲಕ, ವಕೀಲ ಟಿ.ಬಿ. ಶೆಟ್ಟಿ ಪ್ರಾಸ್ತಾವಿಸಿದರು. ವಕೀಲರ ಸಂಘದ ಪ್ರಾದಾನ ಕಾರ್ಯದರ್ಶಿ ಶಿರಿಯಾರ ಜಯಚಂದ್ರ ಶೆಟ್ಟಿ ವಂದಿಸಿದರು. ರಾಘವೇಂದ್ರ ಚರಣ್ ನಾವಡ ನಿರೂಪಿಸಿದರು. 


Aware others:

Leave a Reply

Your email address will not be published. Required fields are marked *

error: Content is protected !!