*ಸಿದ್ಧಾಪುರ: ಶಿಕ್ಷಣದ ಜೊತೆಗೆ ಸಂಪ್ರದಾಯಗಳನ್ನೂ ಅರಿತುಕೊಂಡಾಗ ಕ್ರಿಯಾಶೀಲತೆ ಸಾಧ್ಯ – ಗುರುಪ್ರಸಾದ್ ಹೆಚ್ | ಸರಸ್ವತಿ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*
ಸಿದ್ಧಾಪುರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಂಸ್ಥೆಯ ವತಿಯಿಂದ ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಎಲ್ಲರೂ ಇಂತಹ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬೇಕು ಎಂದು ಗುರುಪ್ರಸಾದ್ ಎಚ್. ಹೇಳಿದರು.

ಕುಂದಾಪುರ ತಾಲೂಕಿನ ಸಿದ್ಧಾಪುರದ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಸರಸ್ವತಿ ವಿದ್ಯಾಲಯದಲ್ಲಿ ಆಯೋಜಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭ ಮುದ್ಧುಕೃಷ್ಣ ಸ್ಪರ್ಧೆಯಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚು ಪುಟಾಣಿ ಶ್ರೀ ಕೃಷ್ಣ ವೇಷಧಾರಿಗಳು ಭಾಗವಹಿಸಿದರು. ತೀರ್ಪುಗಾರರಾಗಿ ಭೌತಶಾಸ್ತ್ರ ಉಪಾಧ್ಯಾಯಿನಿ ದೀಕ್ಷಿತಾ, ರಸಾಯನಶಾಸ್ತ್ರ ಉಪಾಧ್ಯಾಯಿನಿ ಅನುಷಾ ಹಾಗೂ ಇಂಗ್ಲಿಷ್ ಉಪಾಧ್ಯಾಯ ಸುಜನ್ ಅವರು ಭಾಗವಹಿಸಿದ್ದರು.

ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ ಎಸ್ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಯು ಪಾಂಡುರಂಗ ಪಡಿಯಾರ್, ಜ್ಞಾನಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ, ಸರಸ್ವತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ವೇತಾ ಉಪಸ್ಥತರಿದ್ದರು. ಶಿಕ್ಷಕಿ ಪ್ರಜ್ಞಾ ಶೆಟ್ಟಿ ನಿರೂಪಿಸಿದರು. ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.










