Crime newsBlogCulturalEconomyEducationFashionGovernmentHighlightsHuman storiesLifestyleLocal newsOthersPoliticsProtestState newsTop StoriesTrending

ಮಲ್ಪೆ: ಎಂಟು ಎಕ್ರೆ ಬಂದರು ಭೂಮಿ ಅಕ್ರಮ ಗುತ್ತಿಗೆ ಪಡೆದ ಆರೋಪ : ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನೆಗೆ ಮುತ್ತಿಗೆ ಹಾಕಿದ ಸಾರ್ವಜನಿಕರು.

Aware others:

ಮಲ್ಪೆ: ಸರ್ಕಾರ ಕಾಂಗ್ರೆಸ್, ಶಾಸಕ ಬಿಜೆಪಿ! ಜೊತೆಯಾಗಿ ಮಲ್ಪೆ ಕಡಲತೀರವನ್ನು ಬರೋಬ್ಬರಿ 15 ವರ್ಷಕ್ಕೆ ಅಕ್ರಮ ಗುತ್ತಿಗೆ ಪಡೆದ ಪ್ರಕರಣ ಈಗ ಮಲ್ಪೆಯಲ್ಲಿ ಸಂಚಲನ ಮೂಡಿಸಿದೆ. ವಿಷಯ ಗೊತ್ತಾಗುತ್ತಿದ್ದಂತೆ ಚುನಾವಣೆಯಲ್ಲಿ ಉಡುಪಿ ಶಾಸಕರ ಪರ ಕೆಲಸ ಮಾಡಿದವರೂ ಸೇರಿದಂತೆ ನೂರಾರು ಸಾರ್ವಜನಿಕರು ಶಾಸಕ ಯಶ್ಪಾಲ್ ಸುವರ್ಣರ ಮನೆಗೆ ಶುಕ್ರವಾರ ಮುತ್ತಿಗೆ ಹಾಕಿದ್ದಾರೆ.! ಉಡುಪಿಯಲ್ಲೀಗ ಶಾಸಕರ ವಿರುದ್ಧ ಸಂಘಟಿತ ಹೋರಾಟಕ್ಕೆ ಜನ ಸಿದ್ಧವಾಗುತ್ತಿದ್ದಾರೆ.

ಹೌದು. ಮಲ್ಪೆ ಸೀವಾಕ್ ನಿಂದ ಬಾರ್ಡರ್ ವರೆಗೆ ಸುಮಾರು ಎಂಟು ಎಕ್ರೆ ಸರ್ಕಾರೀ ಭೂಮಿಯನ್ನು ಗುತ್ತಿಗೆ ನೀಡಿರುವ ಬಗ್ಗೆ ಕರ್ನಾಟಕ ಸರ್ಕಾರದ ಮೂಲ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿಯಿಂದ ನೀಡಲಾದ ಒಂದು ಒಪ್ಪಿಗೆ ಪತ್ರ ಶಾಸಕ ಯಶ್ಪಾಲ್ ಸುವರ್ಣರ ಬುಡ ಅಲ್ಲಾಡಿಸಿದೆ! ಯಾರ್ಯಾರು ಶಾಸಕರ ಪರವಾಗಿದ್ದರೋ ಅವರೆಲ್ಲಾ ಈಗ ಉಲ್ಟಾ ಆಗಿದ್ದು ಯಾಕೆ? ಇಲ್ಲಿದೆ ನೋಡಿ ಸ್ಟೋರಿ.

ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿಯಮಿತ ಎನ್ನುವ ಸಂಸ್ಥೆಯ ಅಧ್ಯಕ್ಷರೇ ಈ ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ. ಮಂಗಳೂರಿನ ಬೋಳಾರ್ನಲ್ಲಿರುವ ಮುಲಿಹಿತ್ಲು ಎಂಬಲ್ಲಿರುವ ಈ ಫಡೆರೇಶನ್ ಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಾರವಾರದಲ್ಲಿ ಕಚೇರಿ ಹೊಂದಿರುವ ಕರ್ನಾಟಕ ಜಲಸಾರಿಗೆ ಮಂಡಳಿ ಒಳ ಒಪ್ಪಂದ ಮಾಡಿಕೊಂಡು ಒಪ್ಪಿಗೆ ಪತ್ರ ನೀಡಿದ್ದೇ ಈ ಸಂಚಲನಕ್ಕೆ ಕಾರಣ.

ಮಂಡಳಿ ನೀಡಿರುವ ಒಪ್ಪಿಗೆ ಪತ್ರದಲ್ಲಿ ಎಪ್ರಿಲ್ 23ರ 2025ರಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಲಸಾರಿಗೆ ಮಂಡಳಿಯ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ 11ನೇ ಕರ್ನಾಟಕ ಜಲಸಾರಿಗೆ ಮಂಡಳಿ ಸಭೆಯಲ್ಲಿ ಮಲ್ಪೆ ಬಮದರು ವ್ಯಾಪ್ತಿಯಲ್ಲಿ ಇರುವ 37554.55 ಚದರ ಮೀಟರ್ ವಿಸ್ತೀರ್ಣ (ಅಂದಾಜು ಎಂಟು ಎಕ್ರೆ) ಬಂದರು ಭೂಮಿಯನ್ನು 15 ವರ್ಷಗಳ ಅವಧಿಗೆ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿಯಮಿತ ಸಂಸ್ಥೆಗೆ ಮೀನುಗಾರಿಕಾ ಉದ್ಧೇಶದ ನೆಪದಲ್ಲಿ ಗುತ್ತಿಗೆ ನೀಡಲು ಅನುಮೋದನೆ ನೀಡಲಾಗಿತ್ತು. ಅದರಂತೆ ಪ್ರತೀ ಚದರ ಮೀಟರ್ ಗೆ 231ರೂಪಾಯಿಯಂತೆ ಮಾಸಿಕ ದರ ನಿಗಧಿಪಡಿಸಿ ಲೀಸ್ ರೆಂಟ್ ಎಗ್ರಿಮೆಂಟ್ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ನಮೂದಿಸಲಾಗಿದೆ.

ಇದೀಗ ಸ್ಥಳೀಯ ಅಂಗಡಿ ಮುಂಗಟ್ಟುಗಳ ಮಾಲಕರಿಗೆ ತೆರವು ಮಾಡುವಂತೆ ಬಂದರು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಇದೇ ಸ್ಥಳದಲ್ಲಿ ಹಿಂದಿನಿಂದಲೂ ಭಜನಾ ಮಂದಿರವಿದ್ದು, ಸಮೀಪದಲ್ಲಿ ಅಕ್ರಮ ಡಂಪಿಂಗ್ ಯಾರ್ಡ್ ನಿರ್ಮಾಣವಾಗಿತ್ತು. ಅದನ್ನು ರಘುಪತಿ ಭಟ್ ಶಾಸಕರಾಗಿದ್ದ ಸಂದರ್ಭ ಸ್ವಚ್ಛಗೊಳಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗಿತ್ತು. ಸ್ಥಳೀಯರ ಸಹಕಾರದಿಂದ ಮಕ್ಕಳಿಗೆ ಆಟವಾಡಲು, ಪ್ರವಾಸಿಗರಿಗೆ ಕುಳಿತು ಕೊಳ್ಳಲು ಬೆಂಚುಗಳನ್ನು ಅಳವಡಿಸಲಾಗಿತ್ತು. ಅಲ್ಲದೇ ಕಾರ್ಯಕ್ರಮ ಸಂಯೋಜನೆಗಾಗಿ ವೇದಿಕೆಯನ್ನೂ ಮಾಡಲಾಗಿತ್ತು.

ಇದೆಲ್ಲದರ ನಡುವೆ ಸ್ಥಳೀಯ ಗ್ರಾಮಸ್ಥರು ಈ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಯೇ ಉಳಿಸಿಕೊಳ್ಳುವ ಸಲುವಾಗಿ ಕಾದಿರಿಸುವಂತೆ ಸರ್ಕಾರಕ್ಕೆ ಶಾಸಕ ಯಶ್ಪಾಲ್ ಸುವರ್ಣರ ಮೂಲಕ ಮನವಿ ಮಾಡಲಾಗಿತ್ತಾದರೂ ಶಾಸಕ ಯಶ್ಪಾಲ್ ಸುವರ್ಣ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಸಾರ್ವಜನಿಕರ ಗಮನಕ್ಕೆ ಬಾರದೇ ಫೆಡರೇಶನ್ ನ ಇತರ ನಿರ್ದೇಶಕರ ಗಮನಕ್ಕೂ ತಾರದೇ ಒಳ ಒಪ್ಪಂದ ಮಾಡಿಕೊಂಡು ಶಾಸಕ ಯಶ್ಪಾಲ್ ಸುವರ್ಣ ಅಕ್ರಮ ಎಸಗಿದ್ದಾರೆ ಎಂದು ಸ್ಥಳೀಯ ಭಜನಾ ಮಂಡಳಿಯ ಮುಖಂಡರು ಆರೋಪಿಸಿದ್ದಾರೆ.

ಅಕ್ರಮ ಗುತ್ತಿಗೆಯ ಒಳ ಒಪ್ಪಂದದ ಬಗ್ಗೆ ಆಕ್ರೋಶಗೊಂಡ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಶುಕ್ರವಾರ ಶಾಸಕ ಯಶ್ಪಾಲ್ ಸುವರ್ಣರ ಮನೆಗೆ ಮುತ್ತಿಗೆ ಹಾಕಿದ್ದಾರೆ. ಶಾಸಕರನ್ನು ತರಾಟೆಗೆ ತೆಗೆದುಕೊಂಡ ಆಕ್ರೋಶಿತರ ತಂಡ ಕೆಲವು ಸಮಯ ಶಾಸಕರನ್ನು ದಿಗ್ಭಂದನಗೊಳಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ಯಾವತ್ತೂ ನಿಮ್ಮ ಬಳಿ ಬರುವುದಿಲ್ಲ. ನಿಮಗೆ ಬೆಂಬಲ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ ನಿಮಗೆ ಇಷ್ಟವಿಲ್ಲದಿದ್ದರೆ ಒಪ್ಪಿಗೆ ಪತ್ರವನ್ನು ರದ್ಧುಗೊಳಿಸುವುದಾಗಿ ತಿಳಿಸಿದ್ದಾರೆ. ಆದರೆ ಒಪ್ಪಿಗೆ ಪತ್ರ ನಿಜವಾಗಿಯೂ ರದ್ದಾಗುತ್ತದೆಯೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.


Aware others:

Leave a Reply

Your email address will not be published. Required fields are marked *

error: Content is protected !!