ಮಲ್ಪೆ: ಶಾಸಕ ಯಶ್ಪಾಲ್ ಅವರಿಂದ ಬಂದರು ಭೂಮಿ ಗುತ್ತಿಗೆ ಖಂಡನಾರ್ಹ – ಮಾಜೀ ಶಾಸಕ ರಘುಪತಿ ಭಟ್

ಉಡುಪಿ: ಬರೊಬ್ಬರಿ ಒಂಭತ್ತೂವರೆ ಎಕ್ರೆ ಅಂದಾಜಿನ 37,554.55 ಚದರ ಮೀಟರ್ ಬಂದರು ಭೂಮಿಯನ್ನು ಉಡುಪಿ ಶಾಸಕರ ಅಧ್ಯಕ್ಷತೆಯ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವುದು ಖಂಡನಾರ್ಹ ಎಂದು ಉಡುಪಿಯ ಮಾಜೀ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ರಘುಪತಿ ಭಟ್, ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡದ ಕಾಂಗ್ರೆಸ್ ಸರ್ಕಾರ ಶಾಸಕರ ಅಧ್ಯಕ್ಷತೆಯ ಫೆಡರೇಷನ್ ಗೆ ಅನುಮೋದನೆ ನೀಡಿರುವುದರ ಹಿಂದೆ ಷಡ್ಯಂತರ ನಡೆಸಲಾಗಿರುವ ಸಾಧ್ಯತೆ ಇದೆ ಎಂದಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ದೂರುವ ಉಡುಪಿ ಶಾಸಕರು ಸ್ವಂತ ಲಾಭ, ಸ್ವ ಹಿತಾಸಕ್ತಿಯ ಕೆಲಸಕ್ಕೆ ಬಿಜೆಪಿ ಸಿದ್ಧಾಂತವನ್ನು ಗಾಳಿಗೆ ತೂರಿ ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ನಡೆಸಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.
ಉಡುಪಿಯ ಮಲ್ಪೆ ಬಂದರು ವ್ಯಾಪ್ತಿಯ 37554.55 ಚದರ ಮೀಟರ್ ಅಂದರೆ ಸರಿ ಸುಮಾರು 9.50 ಎಕರೆ ವಿಸ್ತೀರ್ಣದ ಬಂದರು ಭೂಮಿಯನ್ನು ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿಯಮಿತ ಮುಲಿಹಿತ್ಲು, ಬೋಳಾರ್, ಮಂಗಳೂರು ಇವರಿಗೆ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಕರ್ನಾಟಕ ಜಲ ಸಾರಿಗೆ ಮಂಡಳಿಯ ಸಭೆಯಲ್ಲಿ ನಿರ್ಣಯಿಸಿ ಅನುಮೋದನೆ ನೀಡಿರುವುದನ್ನು ಬಲವಾಗಿ ಖಂಡಿಸುತ್ತೇನೆ ಎಂದಿರುವ ಅವರು, ಈ ಭೂಮಿಯು ಟೆಬ್ಮಾ ಶಿಫ್ ಯಾರ್ಡ್ ಹಿಂದಿರುವ ಸಿವಾಕ್ ಮತ್ತು ಹನುಮಾನ್ ವಿಠೋಭ ಭಜನಾ ಮಂದಿರದ ಸಮೀಪವಿದ್ದು, ಮೀನುಗಾರಿಕಾ ಉದ್ದೇಶವೆಂದು ಮೀನುಗಾರಿಕಾ ಫೆಡರೇಷನ್ ಗೆ ಗುತ್ತಿಗೆ ನೀಡಿರುವುದು ಸ್ಥಳೀಯ ಹಿತಾಸಕ್ತಿಗೆ ವಿರುದ್ಧವಾಗಿದೆ.
ಈ ಹಿಂದೆ ಉಡುಪಿಗೆ ಭೇಟಿ ನೀಡಿದ್ದ ಕೇಂದ್ರ ಮೀನುಗಾರಿಕಾ ಸಚಿವ ಮುರುಗನ್ ಅವರು ಮೀನುಗಾರಿಕಾ ಸಂಘದ ಮೂಲಕ ಈ ಭಾಗದಲ್ಲಿ 4ನೇ ಹಂತದ ಬಂದರು ಮಾಡುವ ಬಗ್ಗೆ ತಿಳಿಸಿದ್ದರು. ಅಲ್ಲದೆ ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹನುಮಾನ್ ವಿಠೋಬಾ ಭಜನಾ ಮಂದಿರ ಹಾಗೂ ಅಯ್ಯಪ್ಪ ಭಜನಾ ಮಂದಿರದವರು ಜಾಗ ಮಂಜೂರಾತಿಗೆ ನನ್ನ ಅವಧಿಯಲ್ಲಿಯೇ ಮನವಿ ಮಾಡಿದ್ದರು. ಆದರೆ ಆ ಮನವಿಯನ್ನು ನಿರ್ಲಕ್ಷ್ಯಿಸಿ ಮೀನುಗಾರಿಕಾ ಉದ್ದೇಶದ ನೆಪದಲ್ಲಿ ಫೆಡರೇಷನ್ ಗೆ ನೀಡಿರುವುದು ಕಾನೂನುಬಾಹಿರ ಮತ್ತು ಜನ ವಿರೋಧಿ. ತಕ್ಷಣ ಈ ಆದೇಶವನ್ನು ರದ್ದು ಮಾಡಿ ಮಲ್ಪೆ ಭಾಗದಲ್ಲಿರುವ 5 ಭಜನಾ ಮಂಡಳಿಗಳ ನೇತೃತ್ವದ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ಜಾಗ ಮಂಜೂರು ಮಾಡಿ ಮರು ಆದೇಶ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು ಎಂದು ಭಟ್ ಆಗ್ರಹಿಸಿದ್ದಾರೆ.
ನಾನು ಹಾಗೂ ಪ್ರಮೋದ್ ಮಧ್ವರಾಜ್ ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಸುಮಾರು 8 ಕೋಟಿ ಅನುದಾನವನ್ನು ಮಂಜೂರು ಮಾಡಿಸಿ ಅಭಿವೃದ್ಧಿಪಡಿಸಿದ್ದೇವೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಮಲ್ಪೆ ಬೀಚ್ ಅಭಿವೃದ್ಧಿಯಲ್ಲಿ ಅತ್ಯುತ್ತಮ ಪಾತ್ರ ವಹಿಸಿರುವ ಈ ಭಾಗದ 5 ಭಜನಾ ಮಂಡಳಿಗಳನ್ನು ಒಳಗೊಂಡ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ಈ ಭೂಮಿಯನ್ನು ನೀಡಬೇಕು ಎಂದವರು ಆಗ್ರಹಿಸಿದ್ದಾರೆ.
