ಹೆಮ್ಮಾಡಿ ಜನತಾ ವಿದ್ಯಾಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ

ಹೆಮ್ಮಾಡಿ: ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕಿರಿಮಂಜೇಶ್ವರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಾನದ ಕ್ರೀಡಾಕೂಟವು ಹೆಮ್ಮಾಡಿಯ ಜನತಾ ಕ್ರೀಡಾoಗಣದಲ್ಲಿ ನಡೆಯಿತು.
ಕ್ರೀಡಾಕೂಟದ ಅಂಗವಾಗಿ ಹೆಮ್ಮಾಡಿಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ 2 ಕಿ ಮೀ ಅಂತರದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನವರೆಗೆ ಪುರಮೆರವಣಿಗೆಯನ್ನು ನಡೆಸಲಾಯಿತು. ಯಕ್ಷಗಾನ, ಹುಲಿವೇಷ, ಟ್ಯಾಬ್ಲೋಗಳು, ಕಳಶಧಾರಿಗಳು, ಚಂಡೆ ಮತ್ತು ವಿವಿಧವಾದ್ಯವೃಂದಗಳು ಜನಮನ ಸೂರೆಗೊಂಡವು.

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ಅಧ್ಯಕ್ಷ ಶೇಖರ ಖಾರ್ವಿ ಧ್ವಜರೋಹಣಗೈದರು. ಈ ಸಂದರ್ಭ ಬೈಂದೂರು, ಕಾರ್ಕಳ, ಬ್ರಹ್ಮಾವರ, ಕುಂದಾಪುರ ಮತ್ತು ಉಡುಪಿ ತಾಲ್ಲೂಕಿನ ಕ್ರೀಡಾಪಟುಗಳ ಪಥ ಸಂಚಲನ ಆಕರ್ಷಕವಾಗಿದ್ದು, ಉದ್ಯಮಿ ಸುರೇಶ ಕಾಂಚನ್ ಕ್ರೀಡಾಪಟುಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ ಕ್ರೀಡಾ ಜ್ಯೋತಿ ಬೆಳಗಿಸಿದರು.
ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಮತ್ತು ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರ ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಂಕಗಳಿಕೆಯಲ್ಲ. ಉತ್ತಮವಾದ ಶೈಕ್ಷಣಿಕ ಸಾಧನೆಗಳೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಪರಿಣತರನ್ನಾಗಿಸುವುದೇ ನೈಜ ಶಿಕ್ಷಣವಾಗಿದೆ. ನಮ್ಮ ಸಂಸ್ಥೆಯಲ್ಲಿ ನುರಿತ ತರಬೇತುದಾರರ ಮೂಲಕ ಕ್ರೀಡಾಪಟುಗಳಿಗೆ ಅತ್ಯುನ್ನತ ತರಬೇತಿ ನೀಡಿದ್ದರ ಪ್ರತಿಫಲವಾಗಿ ನಮ್ಮ ಸಂಸ್ಥೆಯ ಐದು ವಿದ್ಯಾರ್ಥಿಗಳು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಾವು ಪದವಿಪೂರ್ವ ಹಂತದ ಕಬ್ಬಡಿ, ಕುಸ್ತಿ ಮತ್ತು ಬಾಕ್ಸಿಂಗ್ ಪಂದ್ಯಾಟಗಳನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದು, ಈ ಭಾಗದ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ, ಇಲಾಖೆಯ ಮುಖ್ಯಸ್ಥರ,ನಮ್ಮ ಸಂಸ್ಥೆಯ ಬೋಧಕ- ಬೋಧಕೇತರ ವೃಂದದವರ ಸತತ ಪರಿಶ್ರಮದಿಂದಾಗಿ ಇದು ಸಾಧ್ಯವಾಗಿದೆ. ನಮ್ಮ ಗ್ರಾಮೀಣ ಭಾಗದ ಪ್ರತಿಭೆಗಳ ಪ್ರತಿಭೆಯ ಅನಾವರಣಕ್ಕೆ ನಾವು ಸದಾ ಬದ್ಧರಾಗಿದ್ದೇವೆ ಎಂದರು.
ಉದ್ಯಮಿ ಸುರೇಶ್ ಕಾಂಚನ್ ಮಾತನಾಡಿ, ನಮ್ಮ ಊರು ಪ್ರತಿಭೆಗಳ ತವರೂರು. ಹಿಂದೆ ಸರಿಯಾದ ಮಾರ್ಗದರ್ಶನ, ಉತ್ತೇಜನ ಹಾಗೂ ತರಬೇತಿ ಸಿಗದೆ ಅದೆಷ್ಟೋ ಪ್ರತಿಭೆಗಳು ಎಲೆ ಮರೆಯ ಕಾಯಿಯಂತಾಗಿವೆ. ಆದರೆ ಇಂದು ಜನತಾ ಸಮೂಹ ಸಂಸ್ಥೆಗಳ ಮೂಲಕ ಎಲ್ಲಾ ಪ್ರಕಾರದ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಸಹೃದಯರು, ಕ್ರೀಡಾಪ್ರೇಮಿಗಳು, ಊರಿನ ಗ್ರಾಮಸ್ಥರು ಎಲ್ಲರ ಸಹಕಾರ ದೊರೆತರೆ ನಮ್ಮ ಜಿಲ್ಲೆ ಇನ್ನಷ್ಟು ಎತ್ತರಕ್ಕೆ ಏರಲು ವಿಪುಲ ಅವಕಾಶಗಳಿವೆ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರಾದ
ರಾಜು ಪೂಜಾರಿಯವರು ಮಾತನಾಡಿ, ತನ್ನ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳನ್ನು ದೇಶದ ಸಂಪತ್ತನ್ನಾಗಿಸಬೇಕೆಂಬ ನಿಟ್ಟಿನಲ್ಲಿ ಗಣೇಶ ಮೊಗವೀರರು ಹಗಲಿರುಳೆನ್ನದೆ ಶ್ರಮಪಡುತ್ತಿದ್ದಾರೆ. ಇಂದು ಕೆಲವು ಶಾಲೆಗಳು ವಿದ್ಯಾರ್ಥಿಗಳನ್ನು ಪರೀಕ್ಷೆಗಳಲ್ಲಿ ಉತ್ತೀರ್ಣರನ್ನಾಗಿಸುವುದಕ್ಕೆ ಪರಿತಪಿಸುತ್ತಿರುವ ಈ ಕಾಲಘಟ್ಟದಲ್ಲಿ ಶಿಕ್ಷಣದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳನ್ನು ಸಾಧಕರನ್ನಾಗಿಸುವುದು ಸಾಮಾನ್ಯ ವಿಷಯವಲ್ಲ. ಇಂತಹ ಅದ್ದೂರಿ ಕ್ರೀಡಾಕೂಟವನ್ನು ಆಯೋಜಿಸುವುದು ಕೂಡ ಸಾಮಾನ್ಯ ಮಾತಲ್ಲ, ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ಅಧ್ಯಕ್ಷ ಶೇಖರ ಖಾರ್ವಿ ಮಾತನಾಡಿ, ಉಡುಪಿ ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯುವುದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಅಲೆಯನ್ನೇ ಎಬ್ಬಿಸುತ್ತಿದೆ. ನಮ್ಮ ಜಿಲ್ಲೆಯ ಬಹಳಷ್ಟು ಕ್ರೀಡಾಪಟುಗಳು ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡಾಕ್ಷೇತ್ರಗಳಿಗೆ ಭರಪೂರ ಉತ್ತೇಜನ ನೀಡುವ ಜನತಾ ಸಮೂಹ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಬಿ.ಇ.ಒ ನಾಗೇಶ್ ನಾಯ್ಕ್, ವಿವಿಧ ತಾಲೂಕುಗಳ ದೈಹಿಕ ಶಿಕ್ಷಣ ಪರಿವೀಕ್ಷಕರಾದ ವಿಜಯಕುಮಾರ ಶೆಟ್ಟಿ, ಚಂದ್ರ ಕಾರಂತ, ರವೀಂದ್ರ ನಾಯ್ಕ, ನಿತ್ಯಾನಂದ ಶೆಟ್ಟಿ, ಸತ್ಯನಾರಾಯಣ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಿಜಯಕುಮಾರ ಶೆಟ್ಟಿ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಜನತಾ ಪಿಯು ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ ಮತ್ತು ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.
ಉಡುಪಿ ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಉದಯ್ ನಾಯ್ಕ ನಿರೂಪಿಸಿದರು.
