ಅಂಕದಕಟ್ಟೆ: ರಾಜಕಾಲುವೆ ಒತ್ತುವರಿ ಬಳಿಕ ಆವರಣಗೋಡೆ ಧ್ವಂಸ, ಜೀವ ಬೆದರಿಕೆ ಆರೋಪ – ದೂರು ದಾಖಲು
ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಅಂಕದಕಟ್ಟೆ ಎಂಬಲ್ಲಿರುವ ಸರ್ವಪ್ರಕಾಶ ನಗರದ ಆವರಣ ಗೋಡೆಯನ್ನು ರಾತ್ರೋರಾತ್ರಿ ದುಷ್ಕರ್ಮಿಗಳ ತಂಡ ಒಡೆದು ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಸರ್ವಪ್ರಕಾಶ ನಗರ ಲೇಔಟ್ ನ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ನಾಗೇಶ್ ಕುಂದಾಪುರ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಪ್ರಿಲ್ ತಿಂಗಳಿನಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವಪ್ರಕಾಶ ನಗರಕ್ಕೆ ತಾಗಿಕೊಂಡೇ ಇರುವ ಸರ್ವೆ ನಂಬ್ರ 336/5ರಲ್ಲಿರುವ 23 ಸೆಂಟ್ಸ್ ವಿಸ್ತೀರ್ಣದ ಸರ್ಕಾರೀ ದಾಖಲೆಯಲ್ಲಿರುವ ಈ ಪರಂಬೋಕು ಕಾಲುವೆಯನ್ನು ಪೈಪ್ ಅಳವಡಿಸಿ ರಸ್ತೆ ನಿರ್ಮಿಸ ನಿರ್ಮಿಸಿ ಮುಚ್ಚಲಾಗಿತ್ತು. ಸರ್ವ ಪ್ರಕಾಶ ನಗರ ಲೇಔಟ್ ನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಇಲಾಖೆಗಳು ಮತ್ತೆ ಕಾಲುವೆಯನ್ನು ಯಥಾ ಸ್ಥಿತಿಗೆ ತಂದಿದ್ದರು. ಬಳಿಕ ಸರ್ವ ಪ್ರಕಾಶ ನಗರ ಲೇಔಟ್ ನ ನಿವಾಸಿಗಳು ಕೋಟೇಶ್ವರ ಗ್ರಾಮ ಪಂಚಾಯತಿ ಅನುಮತಿ ಪಡೆದು 23 ಏಪ್ರಿಲ್ 2026ರಂದು ತಮ್ಮ ಲೇಔಟ್‌ಗೆ ಸಂಬಂಧಿಸಿದ ಜಾಗದಲ್ಲಿ ತಡೆಗೋಡೆ ನಿರ್ಮಿಸಿದ್ದರು.

ಆದರೆ, ಜೂನ್ 8ರಂದು ಬೆಳಗಿನ ಜಾವ ಸುಮಾರು 1:30ರ ವೇಳೆಗೆ, ಕೆಲವು ಅಪರಿಚಿತರು ಮುಖಕ್ಕೆ ಕವಚ ಧರಿಸಿ ಲೇಔಟ್ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಹಾರೆ-ಪಿಕಾಸಿಗಳಿಂದ ತಡೆಗೋಡೆ ಧ್ವಂಸ ಮಾಡಿದ್ದಾರೆ. ಈ ವೇಳೆ ಲೇಔಟ್ ಸೆಕ್ಯೂರಿಟಿ ಗಾರ್ಡ್ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದಾಗ, ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಆವರಣಗೋಡೆ ಧ್ವಂಸ ಕೃತ್ಯದಲ್ಲಿ ಸ್ಥಳೀಯರಾದ ಉದಯ ದೇವಾಡಿಗ, ವಿಜಯ ದೇವಾಡಿಗ, ಹೆರಿಯ ದೇವಾಡಿಗ, ಕರಿಯ ದೇವಾಡಿಗ, ಸುಮತಿ ದೇವಾಡಿಗ ಮತ್ತು ಶ್ರೀಪತಿ ಹೆಬ್ಬಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಆವರಣಗೋಡೆ ಧ್ವಂಸದಿಂದಾಗಿ ಸುಮಾರು ಎಪ್ಪತ್ಐದು ಸಾವಿರ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ಡಾ. ನಾಗೇಶ್ ದೂರಿನಲ್ಲಿ ತಿಳಿಸಿದಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 189(2), 329(3), 324(4), 351(2) ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.
