ಸಾಲಿಗ್ರಾಮ: ಘನ ತ್ಯಾಜ್ಯ ಘಟಕ ಉದ್ಘಾಟನೆ ವಿರೋಧಿಸಿ ಪಾರಂಪಳ್ಳಿಯಲ್ಲಿ ಆಹೋರಾತ್ರಿ ಧರಣಿ ಆರಂಭ

ಸಾಲಿಗ್ರಾಮ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದ ಸರ್ವೇ ನಂಬ್ರ 104/24, 25 ರಲ್ಲಿ, ಘನ ತ್ಯಾಜ್ಯ ಘಟಕ ಉದ್ಘಾಟನೆಗೆ ಮುಂದಾಗಿದ್ದನ್ನು ವಿರೋಧಿಸಿದ ಪಾರಂಪಳ್ಳಿ ಗ್ರಾಮಸ್ಥರು ಶುಕ್ರವಾರ ರಾತ್ರಿಯಿಂದ ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಈ ಸಂದರ್ಭ ಧರಣಿಯ ನೇತೃತ್ವ ವಹಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಮಾತನಾಡಿ, ಪಾರಂಪಳ್ಳಿ ಸುತ್ತ ಮುತ್ತಲಿನ ಕೃಷಿ ಭೂಮಿ, ಪರಿಸರಕ್ಕೆ ಮಾರಕವಾಗಿ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ಘನ ತ್ಯಾಜ್ಯ ಘಟಕ / ಕಸ ವಿಲೇವಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಹಾನಿಯಾಗುತ್ತಿದೆ. ಆದ್ದರಿಂದ ಶನಿವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಯೋಜಿಸಿದ ಘನತ್ಯಾಜ್ಯ ಘಟಕ ಉದ್ಘಾಟನೆ ಕೈ ಬಿಡಬೇಕು ಇಲ್ಲದಿದ್ದರೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಮಾತನಾಡಿ, ಘನ ತ್ಯಾಜ್ಯ ಘಟಕದಿಂದಾಗಿ ಈ ಪ್ರದೇಶ ಈಗ ರೋಗ ರುಜಿನಗಳ ಊರಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ಉದ್ಘಾಟನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಯುವ ನಾಯಕ ಮಹೇಶ್ ಪೂಜಾರಿ ಮಾತನಾಡಿ, ಇಲ್ಲಿನ ಸರ್ವೇ ನಂ 104/24, 25 ಜಾಗದ ಭೂ ಪರಿವರ್ತನೆಯಾಗಿಲ್ಲ, ಇ- ಖಾತೆಯೂ ಆಗಿಲ್ಲ. ಆದರೂ ಪಟ್ಟಣ ಪಂಚಾಯತ್ ಭೂಮಿ ಖರೀದಿಸಿದ್ದು, ಕಂದಾಯ ಇಲಾಖೆಯ ಲ್ಯಾಂಡ್ ರೆವೆನ್ಯೂ ಆಕ್ಟ್ 1964 ಅಡಿ ಪ್ರಕಾರ ನಿಯಮ ಉಲ್ಲಂಘನೆ ಮಾಡಿದಂತಾಗಿದೆ. ಸಿ ಆರ್ ಝೆಡ್ ನಿಂದ ಪರವಾನಿಗೆ ಪಡೆಯದೆ ಎಸ್.ಡಬ್ಲ್ಯೂ.ಎಂ ನಿರ್ಮಾಣ (ಘನ ತ್ಯಾಜ್ಯ ಘಟಕ ನಿರ್ಮಾಣ) ಮಾಡಿರುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿಪಕ್ಷ ನಾಯಕ ಶ್ರೀನಿವಾಸ್ ಅಮೀನ್ ಮಾತನಾಡಿ, ಈ ಹಿಂದೆ ಇದ ಜಾಗದಲ್ಲಿ ಮೀನು ಸಂಸ್ಕರಣ ಘಟಕವನ್ನು ಪ್ರಾರಂಭಿಸಿದಾಗ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ನಿರ್ಮಾಣದ ಹಂತದಲ್ಲಿದ್ದ ಮೀನು ಸಂಸ್ಕರಣ ಘಟಕವನ್ನು ಮುಚ್ಚಿಸಿದ್ದರು. ಕಾನೂನಿನ ಪ್ರಕಾರ ಸಿ ಆರ್ ಝೆಡ್ ಪ್ರದೇಶದಲ್ಲಿ, ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ, ಹಾಗೆಯೇ ಎಸ್.ಡಬ್ಲ್ಯೂ.ಎಂ ಅಡಿಯಲ್ಲಿ ಕೃಷಿಭೂಮಿಯ ಬಳಿ ತ್ಯಾಜ್ಯ ನಿರ್ವಹಣೆ ಘಟಕ ಮಾಡುವಂತಿಲ್ಲ. ಪ್ರತಿಭಟನಾಕಾರರ ಜೊತೆಗೆ ನಿಲ್ಲುವುದಾಗಿ ತಿಳಿಸಿದರು.
ಇದೇ ಸಂದರ್ಭ ಪ್ರತಿಭಟನಾಕಾರರು, ಪಟ್ಟಣ ಪಂಚಾಯತ್ ವಿರುದ್ಧ ಧಿಕ್ಕಾರ ಕೂಗಿದರು. ಮತ್ತು ಧರಣಿಯನ್ನು ಮುಂದುವರೆಸಿದರು. ಪಾರಂಪಳ್ಳಿ ಗ್ರಾಮಸ್ಥರು ಸರಣಿ ಪಾಳಿಯಲ್ಲಿ ಆಹೋರಾತ್ರಿ ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ.
