ಕುಂದಾಪುರ: ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ನಿಷ್ಠಾವಂತ ಕಾರ್ಯಕರ್ತನಿಗೆ ಅವಕಾಶ ಸಿಗಲಿ : ಅಜಿತ್ ಕುಮಾರ್ ಶೆಟ್ಟಿ

ಕುಂದಾಪುರ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಅಥವಾ ಇತರೆ ಪ್ರಮುಖ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಮತಬ್ಯಾಂಕ್ ಅಥವಾ ಜಾತಿ ಆಧಾರಿತ ಲೆಕ್ಕಾಚಾರಕ್ಕಿಂತಲೂ ಪಕ್ಷದ ನಿಷ್ಠೆ, ಸಂಘಟನೆಗೆ ಕೊಡುಗೆ ಮತ್ತು ಭವಿಷ್ಯದಲ್ಲಿ ಪಕ್ಷದ ಪರ ದುಡಿಯುವ ಶಕ್ತಿ ಇರುವವರ ಆಯ್ಕೆ ಅನಿವಾರ್ಯವಾಗತ್ತಿದ್ದು ಇದನ್ನು ಸರ್ಕಾರ ಮನಗಾಣಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಹೇಳಿದ್ದಾರೆ.
ಯಾವುದೇ ಜಾತಿ ಮತದ ಬೇಧವಿಲ್ಲದೇ ಸದಾ ಪಕ್ಷ ಸಂಘಟನೆ ಜೊತೆ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಪಕ್ಷದ ಧ್ವಜ ಎತ್ತಿ ಕಾರ್ಯ ನಿರ್ವಹಿಸಿದ ನಿಷ್ಠಾವಂತರನ್ನು ಸರ್ಕಾರ ಗುರುತಿಸಬೇಕಾಗಿದೆ ಎಂದವರು ಹೇಳಿದ್ದಾರೆ.
ಬಲಿಷ್ಠ ಪಕ್ಷ ಸಂಘಟನೆಯ ನಿರ್ಮಾಣದ ಸಲುವಾಗಿ, ಸಂಘಟನೆಯೊಳಗಿನ ಸಜ್ಜನ, ಬದ್ಧತೆ ಹೊಂದಿದ ನೈಜ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ಇದರಿಂದ ಪಕ್ಷದ ಶಕ್ತಿ ಹೆಚ್ಚುವುದು ಮಾತ್ರವಲ್ಲದೆ, ಜನರ ನಡುವೆ ನಂಬಿಕೆಯನ್ನು ಬೇರೂರಿಸಲು ಸಹಕಾರಿಯಾಗುತ್ತದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.