ಬ್ರಹ್ಮಾವರ: ಕುಂದಗನ್ನಡ ಅಧ್ಯಯನ ಪೀಠ ಸ್ಥಾಪನೆಯಾಗಲಿ- ಬ್ರಹ್ಮಾವರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನರೇಂದ್ರ ಕುಮಾರ್ ಕೋಟ ಆಗ್ರಹ
ಬ್ರಹ್ಮಾವರ: ಕನ್ನಡ ಭಾಷಾಭಿಮಾನ ವೃದ್ಧಿಯಾಗಬೇಕು, ಚುಟುಕು ಸಾಹಿತ್ಯದ ಮೂಲಕ ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಪುಸ್ತಕ ಓದುವ ಹಾಗೂ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು, ಈ ಬಗ್ಗೆ ಈಗಾಗಲೇ ಬ್ರಹ್ಮಾವರ ತಾಲೂಕಿನಲ್ಲಿ 70 ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಂದಗನ್ನಡ ಅಧ್ಯಯನಪೀಠ ಶೀಘ್ರವಾಗಿ ಸ್ಥಾಪನೆಯಾಗಬೇಕು. ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ ಎಂದು ಸಾಹಿತಿ ನರೇಂದ್ರ ಕುಮಾರ್ ಕೋಟ ಹೇಳಿದರು. ಭಾನುವಾರ ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕದ ನೇತೃತ್ವದಲ್ಲಿ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಬತ್ತದ ಹೆಜ್ಜೆ ನಾವೀನ್ಯದ ನಂದಾದೀಪ ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಬ್ರಹ್ಮಾವರ ತಾಲೂಕಿನಲ್ಲಿ ಹುಟ್ಟಿ ನಡೆದಾಡುವ ವಿಶ್ವಕೋಶರಾದ ಜ್ಞನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರು ಸಾಹಿತ್ಯಿಕ ಬದುಕಿನಲ್ಲಿ ವಿಶ್ವಪ್ರಸಿದ್ಧರು ಅವರ ಹೆಸರಿನಲ್ಲಿ ಕಾರಂತ ಥೀಂ ಪಾರ್ಕ್, ಕಾರಂತ ಟ್ರಸ್ಟ್ ಸ್ಥಾಪನೆ, ರಾಜಕಾರಣದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಕ್ಕೆ ಆನಂದ್ ಸಿ ಕುಂದರ್, ವಡ್ಡರ್ಸೆ ಮಹಾಲಿಂಗೇಶ್ವರ ದೇಗುಲದಲ್ಲಿರುವ ಪ್ರಾಚೀನ ಶಾಸನ, ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಮಾಧ್ಯಮ ಸಾಧಕರಾಗಿ ಗುರುತಿಸಿಕೊಂಡ ಪರಿ, ಸರ್ವ ಧರ್ಮ ಸಮಸ್ವಯ ಸಾರುವ ಈ ಬ್ರಹ್ಮಾವರ, ಅಳುಪರ ಶಾಸನ, ಸೂರಾಲು ಅರಮನೆ, ರಂಗಭೂಮಿ ಕ್ಷೇತ್ರದಲ್ಲಿ ಗೋಪಾಲ್ ಆಚಾರ್ಯ, ಬಾಲಕೃಷ್ಣ ಪೂಜಾರಿ, ಅಲ್ವಿನ್ ಆಂದ್ರಾದೆ, ಸಿನಿಮಾ ಕ್ಷೇತ್ರದಲ್ಲಿ ರಘು ಪಾಂಡೇಶ್ವರ, ಸಾಹಿತ್ಯಿಕ ಯುವ ಸಾಹಿತ್ಯಾಸಕ್ತರು, ರಾಜ್ಯ ಸರಕಾರ ತುಳು ಭಾಷೆಗೆ ಮಾನ್ಯತೆ ನೀಡ ಬಗೆ ಶ್ಲಾಘಿಸಿದ ಅವರು ಕುಂದಭಾಷೆಯ ಅಧ್ಯಯನಪೀಠ ಸ್ಥಾಪನೆಯ ಬಗ್ಗೆ ಜಯಪ್ರಕಾಶ್ ಹೆಗ್ಡೆಯವರಂತವರು ಹೋರಾಟದ ದಾರಿ ನೆನಪಿಸಿ, ಪರಿಸರದ ಕ್ರಾಂತಿ ಪಂಚವರ್ಣ ಸಂಘಟನೆ ಕೋಟ, ಆನಂದ ಸೃಷ್ಠಿ , ಭಾಷಾ ಪಂಡಿತ ವಿಠ್ಠಲ ವಿ ಗಾಂವ್ಕರ್, ಹೀಗೆ ಅನೇಕ ವಿಚಾರಗಳನ್ನು ತಮ್ಮ ಸಮ್ಮೇಳನಾ ನುಡಿಯಲ್ಲಿ ಬಿಚ್ಚಿಟ್ಟರು.

ಸಾಸ್ತಾನದ ಗೋಳಿಗರಡಿ ದೈವಸ್ಥಾನದಿಂದ ಹೊರಟ ವೈಭವದ ಮೆರವಣಿಗೆಗೆ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಗೋಳಿಗರಡಿ ದೈವಸ್ಥಾನದ ಪಾತ್ರಿ ಶಂಕರ್ ಪೂಜಾರಿ ಚಾಲನೆ ನೀಡಿದರು. ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದ ಸನಿಹದ ತುಂಗರ ಮಠದ ಶಿವ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಸಭಾಂಗಣಕ್ಕೆ ಆಗಮಿಸಲಾಯಿತು. ಸಾಹಿತಿ ಪಾ.ಚಂದ್ರಶೇಖರ್ ಚಡಗ ಕಾರ್ಯಕ್ರಮ ಉದ್ಘಾಟಿಸಿದದರು. ಸಮ್ಮೇಳನದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಚಾಗಂಟೆ ಬಾರಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪಿ.ನರಸಿಂಹ ಐತಾಳರ ಅನುಪಸ್ಥಿತಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಕನ್ನಡ ಧ್ವಜವನ್ನು ಪ್ರಸ್ತುತ ಸಮ್ಮೇಳನಾಧ್ಯಕ್ಷ ನರೇಂದ್ರ ಕುಮಾರ್ ಕೋಟ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಕಸಾಪ ಗೌರವಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯದ ನುಡಿಯನ್ನಾಡಿದರು.

ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಾಹ್ನ ಐರೋಡಿ ಗ್ರಾಮ ಆಡಳಿತಾಧಿಕಾರಿ ಡಾ.ಸೂರಜ್ ಶೆಟ್ಟಿ ರಾಷ್ಟ್ರ ಧ್ವಜಾರೋಹಣ, ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಪರಿಷತ್ ಧ್ವಜಾರೋಹಣ ನೆರವೆರಿಸಿದರು. ಮುಖ್ಯ ಅತಿಥಿಗಳಾಗಿ ಸಾಸ್ತಾನ ಸಿ ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ, ಸಾಲಿಗ್ರಾಮ ದೇಗುಲದ ಟ್ರಸ್ಟಿ ಪ್ರಸನ್ನ ತುಂಗ, ತಾಲೂಕು ಸಾಹಿತ್ಯ ಪರಿಷತ್ತನ ಮಡಿ ವಿಶ್ವನಾಥ ಖಾರ್ವಿ, ಶಿಕ್ಷಕ ಸತೀಶ್ ಶೆಟ್ಟಿ, ಉಮಾನಾಥ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ವಾನ್ ಡಾ.ವಿಜಯ ಮಂಜರ್, ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ, ಗೌರವ ಕೋಶಾಧ್ಯಕ್ಷ ಮನೋಹರ ಪಿ, ಕೋಟ ವಿದ್ಯಾಸಂಘದ ರಾಮದೇವ ಐತಾಳ್, ಸಾಂಸ್ಕೃತಿಕ ಚಿಂತಕ ರಘು ಮಧ್ಯಸ್ಥ, ಪ್ರತಾಪ್ ಶೆಟ್ಟಿ ಸಾಸ್ತಾನ, ಶೈಕ್ಷಣಿಕ ಚಿಂತಕ ರಿಷಿರಾಜ್ ಸಾಸ್ತಾನ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಕೊಂಡಳಿ ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ಯು.ಎಸ್ ಶೆಣೈ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಸ್ವಾಗತಿಸಿ, ತಾಲೂಕು ಘಟಕದ ಕೋಶಾಧಿಕಾರಿ ಅಲ್ತಾರ್ ನಾಗರಾಜ್ ನಿರೂಪಿಸಿ, ಸದಸ್ಯ ಪ್ರಶಾಂತ್ ಶೆಟ್ಟಿ ಸಾಸ್ತಾನ ವಂದಿಸಿದರು. ಗಿರೀಶ್ ಅಡಿಗ ನಿರೂಪಿಸಿದರು. ಶಿಕ್ಷಕಿ ಮಹಾಲಕ್ಷ್ಮೀ ಸೋಮಯಾಜಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಸುರೇಶ್ ಕಾರ್ಕಡ, ಮೀನಾ ಕಾರಂತ್ ನಾಡಗೀತೆ, ರೈತಗೀತೆ ಹಾಡಿದರು. ಸತೀಶ್ ವಡ್ಡರ್ಸೆ ಸಹಕರಿಸಿದರು. ಗೀತಾನಂದ ಫೌಂಡೇಶನ್ ಮಣೂರು , ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ ಸಹಕಾರಿ ನೀಡಿತು.
