ಕುಂದಾಪುರ: ಯುವಜನರಿಗೆ ನಾಯಕತ್ವದ ಜತೆಗೆ ಸಮಾಜ ಸೇವೆಯ ತರಬೇತಿ ಅಗತ್ಯ: ಎಂ.ಎ. ಗಫೂರ್
ಕುಂದಾಪುರ: ಯುವಜನರನ್ನು ರಚನಾತ್ಮಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸುವ ಅಗತ್ಯವಿದೆ. ಸಮಾಜದ ಧ್ವನಿ ಇಲ್ಲದವರು, ಶೋಷಿತರು ಹಾಗೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರದ ಜತೆಗೆ ಸಾಮಾಜಿಕ ಸಂಘಟನೆಗಳೂ ಕೈಜೋಡಿಸಬೇಕು. ಯುವಜನರಲ್ಲಿ ಸಾಮಾಜಿಕ ಚಿಂತನೆ ಬೆಳೆಸುವಲ್ಲಿ ಜೇಸಿಐನಂತಹಾ ಸಂಸ್ಥೆಗಳು ಮಹತ್ವದ ಕಾರ್ಯ ನಿರ್ವಹಿಸುತ್ತಿವೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.


ಜೇಸಿಐ ಕುಂದಾಪುರ ಸಿಟಿ ವತಿಯಿಂದ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಆಯೋಜಿಸಿದ್ದ ಜೇಸಿಐ ಸಪ್ತಾಹ-2026ರ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜೆಸಿ ಯೂಸಫ್ ಸಲೀಂ (ಕಮಲ ಪತ್ರ ಪ್ರಶಸ್ತಿ), ಅಬ್ದುಲ್ ಸಲಾಂ ಚಿತ್ತೂರು (ಶಿಕ್ಷಣ), ಐವನ್ ಅಲ್ಮೇಡಾ (ಸ್ವರ್ಣ ಪ್ರಶಸ್ತಿ), ಎಲ್.ಎನ್. ಹಂಸರಾಜ್ ಶೆಟ್ಟಿ (ಉದ್ಯಮ) ಹಾಗೂ ಜೆಸಿ ರವಿಕಿರಣ್ ಮುರುಡೇಶ್ವರ (ಸಮಾಜ ಸೇವೆ) ಅವರನ್ನು ಸನ್ಮಾನಿಸಲಾಯಿತು.


ಬಳಿಕ ಮಾತನಾಡಿದ ವಕೀಲ ರವಿಕಿರಣ್ ಮುರುಡೇಶ್ವರ, ಸಂಘಟನೆ ಹಾಗು ಸಮಾಜಸೇವೆಗಳ ಮೂಲಕ ಸಾಮಾನ್ಯ ಜ್ಞಾನ, ಕಾನೂನು ತಿಳುವಳಿಕೆಗಳನ್ನು ಅರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.


ಲಯನ್ಸ್ ಕ್ಲಬ್ ಅಧ್ಯಕ್ಷ ಎಲ್.ಎನ್. ಹಂಸರಾಜ್ ಶೆಟ್ಟಿ, ಸಂಘ-ಸಂಸ್ಥೆಗಳು ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯುವಜನರ ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಸೇವಾ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯುತ್ತದೆ ಎಂದರು.


ಉಡುಪಿ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದಾಗ ಮಾತ್ರ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ದೊರೆಯಲು ಸಾಧ್ಯ. ಸರ್ಕಾರಿ ಶಾಲೆಗಳು ಎಲ್ಲ ಜಾತಿ, ಧರ್ಮ ಹಾಗೂ ವರ್ಗಗಳ ಮಕ್ಕಳು ಒಟ್ಟಾಗಿ ಕಲಿಯುವ ಸಂಸ್ಕಾರ ಕೇಂದ್ರಗಳಾಗಿವೆ. ತಾವು ಕಲಿತ ಸರ್ಕಾರಿ ಶಾಲೆಗೆ ವರ್ಷಕ್ಕೊಮ್ಮೆಯಾದರೂ ಭೇಟಿ ನೀಡಿ, ಸಾಧ್ಯವಾದಷ್ಟು ನೆರವು ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.


ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಕಿರಣ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಭಾರತ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಕಾರ್ತಿಕೆಯ ಮಧ್ಯಸ್ಥ, ಪೂರ್ವ ಅಧ್ಯಕ್ಷರಾದ ಜಯಚಂದ್ರ ಶೆಟ್ಟಿ, ನಾಗೇಶ್ ನಾವುಡ,ರಾಘವೇಂದ್ರ ಚರಣ್ ನಾವಡ, ಮಂಜುನಾಥ್ ಕಾಮತ್, ಸುಮಾ ಆಚಾರ್,ವಿಜಯ ಭಂಡಾರಿ, ಡಾ. ಸೋನಿ ಡಿಕೋಸ್ಟ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕಾರ್ಯದರ್ಶಿ ನವೀನ್ ಸಂಭ್ರಮ, ಸಪ್ತಾಹದ ಸಭಾಪತಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಲೇಡಿ ಜೇಸಿ ಸಂಯೋಜಕಿ ದೀಪಾ, ಯುವ ಜೇಸಿ ಸಂಚಾಲಕ ರಾಹುಲ್ ಗೋಡೆ ಸೇರಿದಂತೆ ಜೇಸಿಐ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಅಧ್ಯಕ್ಷ ಕಿರಣ್ ದೇವಾಡಿಗ ಸ್ವಾಗತಿಸಿದರು. ಸಪ್ತಾಹದ ಸಭಾಪತಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ನಿರೂಪಿಸಿ, ಜೇಸಿ ರಾಹುಲ್ ಗೋಡೆ ವಂದಿಸಿದರು.
