BlogCulturalEconomyEducationHighlightsHuman storiesLifestyleLocal newsOthersTop StoriesTrendingWomen Care

ಕುಂದಾಪುರ: ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ – ಡಾ. ಧನ್ಯಾ ಹೆಗ್ಡೆ

Aware others:

ಸುಜ್ಞಾನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ಸ್ವಚ್ಛತೆ ಜಾಗೃತಿ ಕಾರ್ಯಕ್ರಮ

ಕುಂದಾಪುರ: ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣದ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಮುಖ್ಯವಾಗಿ ಹಾಸ್ಟೆಲ್‌ನಲ್ಲಿ ವಾಸಿಸುವ ವಿದ್ಯಾರ್ಥಿನಿಯರು ವೈಯಕ್ತಿಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕರ್ನಾಟಕ ಸರ್ಕಾರದ ಎನ್.ಆರ್.ಸಿ ವೈದ್ಯಕೀಯ ಅಧಿಕಾರಿ ಡಾ. ಧನ್ಯಾ ಎನ್. ಹೆಗ್ಡೆ ತಿಳಿಸಿದರು. ಇಲ್ಲಿನ ಸುಜ್ಞಾನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾಗಿದ್ದ ಆರೋಗ್ಯ, ವೈಯಕ್ತಿಕ ಸ್ವಚ್ಛತೆ ಹಾಗೂ ಋತುಚಕ್ರದ ವೈಜ್ಞಾನಿಕ ನಿರ್ವಹಣಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

“ದೇಹವನ್ನು ದೇಗುಲದಂತೆ ಪವಿತ್ರವಾಗಿಟ್ಟುಕೊಳ್ಳಬೇಕು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವೇ ನಿಜವಾದ ಆಸ್ತಿ. ಸಮಯಕ್ಕೆ ಸರಿಯಾದ ನಿದ್ರೆ, ಪೌಷ್ಟಿಕ ಆಹಾರ ಹಾಗೂ ನಿಯಮಿತ ನೀರು ಸೇವನೆ ನಿಮ್ಮ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಹಾಸ್ಟೆಲ್‌ನಲ್ಲಿ ನೆಲೆಸಿರುವ ವಿದ್ಯಾರ್ಥಿನಿಯರು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಋತುಚಕ್ರದ ಸಮಯದಲ್ಲಿ ನಿಯಮಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸುವುದು ಮತ್ತು ಒಳ ಉಡುಪುಗಳ ಪರಿಶುದ್ಧತೆ ಕಾಯ್ದುಕೊಳ್ಳುವುದು ಚರ್ಮದ ಸೋಂಕು ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ವೈಯಕ್ತಿಕ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳದೆ ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಮಾನಸಿಕ ಒತ್ತಡವನ್ನು ನಿರ್ವಹಿಸುವುದು ಆರೋಗ್ಯಕರ ಜೀವನಶೈಲಿಗೆ ಅತ್ಯಗತ್ಯ,” ಎಂದು ವೈಜ್ಞಾನಿಕ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, “ಕೇವಲ ಪಠ್ಯ ಪುಸ್ತಕದ ಓದಿನಿಂದಷ್ಟೇ ವ್ಯಕ್ತಿತ್ವ ರೂಪಗೊಳ್ಳುವುದಿಲ್ಲ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಇಂತಹ ಜಾಗೃತಿ ಕಾರ್ಯಕ್ರಮಗಳು ಪೂರಕ. ಸಮಾಜದ ವಿಭಿನ್ನ ಕ್ಷೇತ್ರದ ಅನುಭವಿ ಸಂಪನ್ಮೂಲ ವ್ಯಕ್ತಿಗಳು ನಮ್ಮ ಸಂಸ್ಥೆಗೆ ಬಂದಾಗ, ಅವರ ಮಾರ್ಗದರ್ಶನದಿಂದ ಮಕ್ಕಳಲ್ಲಿ ಹೊಸ ಭರವಸೆ ಮತ್ತು ದೊಡ್ಡ ಕನಸುಗಳು ಚಿಗುರೊಡೆಯಲು ಸಹಾಯಕವಾಗುತ್ತದೆ ಎಂಬ ಉದ್ದೇಶದಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳುತ್ತೇವೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಅವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ನಿರ್ವಹಣೆ ಅತಿ ಮುಖ್ಯ. ದೈನಂದಿನ ಜೀವನದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಂಡಾಗ ಮಾತ್ರ ವಿದ್ಯಾಭ್ಯಾಸದ ಕಡೆಗೆ ಸಂಪೂರ್ಣ ಗಮನ ಹರಿಸಲು ಸಾಧ್ಯ,” ಎಂದರು. ವೇದಿಕೆಯಲ್ಲಿ ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್, ವಿದ್ಯಾರಣ್ಯ ಗ್ಲೋಬಲ್ ಶಾಲೆಯ ಪ್ರಾಂಶುಪಾಲರಾದ ಅನಿತಾ ಕುಮಾರಿ ಹಾಗೂ ಉಪಪ್ರಾಂಶುಪಾಲರಾದ ಸ್ಪೂರ್ತಿ ಎ. ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!