ಡೇವಿಡ್ ಹತ್ಯೆ ಪ್ರಕರಣ – ಶೂಟರ್ ದಲ್ಲಾಳಿ ಅನುಜ್ ನಿಂದ ಪೊಲೀಸರ ಮೇಲೆ ದಾಳಿ – ಆತ್ಮರಕ್ಷಣೆಗೆ ಪೊಲೀಸ್ ಫೈರ್!?
ಉಡುಪಿ: ಆಗಸ್ಟ್ 7ರಂದು ಮಧ್ಯಾಹ್ನ ನಡೆದ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪೊಲೀಸರ ತನಿಖೆಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಡೇವಿಡ್ ಹತ್ಯೆಗೆ ಶೂಟರ್ ಗಳನ್ನು ಸಪ್ಲೈ ಮಾಡಿದ್ದ ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಬಿಹಿರ್ದೆಸೆಗೆ ನಿಂತಾಗ ಪೊಲೀಸರ ಮೇಲೆಯೇ ದಾಳಿ ನಡೆಸಿದ ಸಂದರ್ಭ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡಿಕ್ಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಬಿಹಾರ ಮೂಲದ ನಳಂದ, ಸಾರ್ಮರ್ ನಿವಾಸಿ ಕಮಲೇಶ್ವರ ಪಾಟೀಲ್ ಎಂಬಾತನ ಮಗ ಪ್ರಸ್ತುತ ಮುಂಬೈನಲ್ಲಿ ಕಾರ್ಯಾಚರಿಸುತ್ತಿದ್ದ ಅನುಜ್ ಪಾಟೀಲ್(35) ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಅನುಜ್ ಪಾಟೀಲನು ಡೇವಿಡ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಮೂವರು ಶೂಟರ್ ಗಳನ್ನು ಕಳುಹಿಸಿದ್ದ. ಈ ಸಂಬಂಧ ಕುಂದಾಪುರ ಠಾಣೆ ಎಸೈ ನಂಜ ನಾಯಕ್, ಮತ್ತು ಕೊಲ್ಲೂರು ಠಾಣೆ ಎಸೈ ವಿನಯ್, ಮತ್ತು ತಂಡ ಸೋಮವಾರ ಬೆಳಿಗ್ಗೆ 6-6.30 ಸಮಯದಲ್ಲಿ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಮುಂಬೈನ ನಟೋರಿಯಸ್ ಗ್ಯಾಂಗ್ ಸ್ಟರ್ ಅನುಜ್ ಪಾಟೀಲ್ ನನ್ನು ದಸ್ತಗಿರಿ ಮಾಡಿ ಕರೆದುಕೊಂಡು ಬರುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿ, ಕೊಲ್ಲೂರು ಪಿಎಸ್ಐ ವಿನಯ್ ರವರ ಆಯುಧವನ್ನು ಕಸಿದು, ಫೈಯರ್ ಮಾಡಿದ್ದು, ಈ ಸಮಯದಲ್ಲಿ ಕುಂದಾಪುರ ಪೊಲೀಸ್ ಉಪನಿರೀಕ್ಷಕರಾದ ನಂಜ ನಾಯ್ಕರವರು ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿದ್ದಾರೆ. ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರ ಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆರೋಪಿ ಅನುಜ್ ಪಾಟೀಲ್ ಮುಂಬೈ ನಲ್ಲಿ ಕಾರ್ಯಾಚರಿಸುತ್ತಿದ್ದು 2017 ರಿಂದ ತಲೆಮರಿಸಿಕೊಂಡಿದ್ದ. ಈತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆ ದಾಖಲಿಸಲಾಗಿದೆ. ಒಟ್ಟು 11 ಪ್ರಕರಣಗಳು ದಾಖಲಾಗಿದ್ದು 10 ಪ್ರಕರಣಗಳು Arms act ಪ್ರಕರಣಗಳಾಗಿವೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್ ನಲ್ಲಿ ಐದು, ಡಿಯೂ ಡಾಮನ್ ನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿದೆ.
