ಬ್ರಹ್ಮಾವರ: ಹಿಂಸೆಯ ನೆಪದಲ್ಲಿ ಅಪ್ಪ ಅಮ್ಮನನ್ನೇ ಕೊಂದ ಮಗ : ಮಾದಕ ವ್ಯಸನದ ಶಂಕೆ!?
ಬ್ರಹ್ಮಾವರ: ತಂದೆ ತಾಯಿಯವರು ಪ್ರತಿನಿತ್ಯ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರೆಂದು ಆರೋಪಿಸಿದ ಸೋಮಾರಿ ಮಗನೊಬ್ಬ ಅಪ್ಪ ಅಮ್ಮನನ್ನೇ ಸುತ್ತಿಗೆಯಿಂದ ಹೊಡೆದುಕೊಂದ ಘಟನೆ ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ಗಾಂಧಿನಗರ ಎಂಬಲ್ಲಿ ನಡೆದಿದೆ. ಕೊಲೆ ಮಾಡಿದ ವ್ಯಕ್ತಿಯನ್ನು ಶಾಹಿದ್ ಅಲಿ (25) ಎಂದು ಗುರುತಿಸಲಾಗಿದ್ದು, ಆತನ ತಂದೆ ಮೆಹಬೂಬ್ ಅಲಿ (55) ಹಾಗೂ ತಾಯಿ ಸಂಶದ್ ಬೇಗಂ (50) ಎಂದು ತಿಳಿದು ಬಂದಿದೆ.

ಮೆಹಬೂಬ್ ಅಲಿ ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದರು. ಆರೋಪಿ ಮಗ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಆದರೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಅಪ್ಪ ಅಮ್ಮ ಮಗನಿಗೆ ಬುದ್ಧಿ ಹೇಳುತ್ತಿದ್ದರು ಎನ್ನಲಾಗಿದೆ. ಇದರಿಂದ ಮನೆಯವರ ಜೊತೆಗೆ ನಿತ್ಯ ಜಗಳ ಮಾಡುತ್ತಿದ್ದ ಶಾಹಿದ್ ಆಲಿ ಭಾನುವಾರ ರಾತ್ರಿ ಸುತ್ತಿಗೆಯಿಂದ ಇಬ್ಬರ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಆರೋಪಿ ಬಳಿಕ 112ಕ್ಕೆ ಕರೆ ಮಾಡಿ ತಾನು ಅಪ್ಪ ಅಮ್ಮನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಸೋಮವಾರ ಬೆಳಿಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಬಳಿಕ ಆರೋಪಿ ಶಾಹಿದ್ ಆಲಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿಯಲ್ಲೀಗ ಗಾಂಜಾ ಮತ್ತು ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದು ಈ ಪ್ರಕರಣದಲ್ಲಿಯೂ ಮಾದಕ ವ್ಯಸನದ ನಂಟು ಅಡಗಿದೆಯೇ ಎನ್ನುವ ಅನುಮಾನ ಎಲ್ಲೆಡೆ ಕೇಳಿ ಬರುತ್ತಿದೆ. ಪೊಲೀಸರ ಸರಿಯಾದ ತನಿಖೆಯಿಂದಷ್ಟೇ ನಿಜಾಂಶ ತಿಳಿದು ಬರಬೇಕಿದೆ.
