ಸಿದ್ಧಾಪುರ: ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಗಿಲ್ ವಿಜಯ ದಿವಸ್ – ಸನ್ಮಾನ
ಕುಂದಾಪುರ: ಸಿದ್ಧಾಪುರದ ಸುಮುಖ ಎಜ್ಯುಕೇಷನಲ್ ಟ್ರಸ್ಟ್ ಪ್ರವರ್ತಿತ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸರಸ್ವತಿ ವಿದ್ಯಾಲಯದ ಸಭಾಂಗಣದಲ್ಲಿ ಜುಲೈ 28ರ ಮಂಗಳವಾರ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಅತಿಥಿಗಳಾಗಿ ನಿವೃತ್ತ ಸುಬೇದಾರ್ ಮೇಜರ್ ಹಾಗೂ ಲೆಫ್ಟಿನೆಂಟ್ ಗಣೇಶ್ ಅಡಿಗ ಹಾಗೂ ನಿವೃತ್ತ ಸೈನಿಕ (ಆರ್ಮರ್ಡ್ ರೆಜಿಮೆಂಟ್) ಕರುಣಾಕರ ಗಾಣಿಗ ಬಸ್ರೂರು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬ ದೇಶವಾಸಿಯಲ್ಲಿಯೂ ತನ್ನ ದೇಶದ ಬಗ್ಗೆ ದೇಶಭಕ್ತಿ, ದೇಶಪ್ರೇಮ, ಗೌರವವಿರಬೇಕು. ತನ್ನನ್ನು ತಾನು ತನ್ನ ದೇಶದ ರಕ್ಷಣೆ ಹಾಗೂ ಭದ್ರತೆಗೆ ಮುಡಿಪಾಗಿಡಬೇಕು. ದೇಶಭಕ್ತಿ ಹಾಗೂ ದೇಶ ಪ್ರೇಮ ದೇಶದ ಅಭಿವೃದ್ಧಿ ಮತ್ತು ಉನ್ನತಿಗಾಗಿ ತನ್ನನ್ನು ಸಮರ್ಪಣಾಭಾವದಿಂದ ಸಶಕ್ತನನ್ನಾಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು. ಇದೇ ಸಂದರ್ಭ ಕಾರ್ಗಿಲ್ ಯುದ್ಧದ ಅನುಭವಗಳನ್ನು ಹಂಚಿಕೊಂಡರು. ದೇಶಸೇವೆಯ ಮಹತ್ವ, ಶಿಸ್ತು, ದೇಶಪ್ರೇಮ ಹಾಗೂ ಯುವಜನರು ರಾಷ್ಟ್ರ ನಿರ್ಮಾಣದಲ್ಲಿ ವಹಿಸಬೇಕಾದ ಪಾತ್ರದ ಕುರಿತು ವಿವರಿಸಿದರು.

ಇದೇ ಸಂದರ್ಭ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಭಕ್ತಿಯನ್ನು ಸದಾ ಕಾಪಾಡುವ ಸಂಕಲ್ಪವನ್ನು ಕೈಗೊಳ್ಳಲಾಯಿತು. ಸುಮುಖ ಎಜ್ಯುಕೇಷನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟೀ ಬಿ. ಎಸ್. ಸುರೇಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ, ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ, ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ ಉಪಸ್ಥಿತರಿದ್ದರು.


ಜ್ಞಾನಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ದೇಶಭಕ್ತಿಗೀತೆಗಳನ್ನು ಹಾಡಿದರು. ಜ್ಞಾನಸರಸ್ವತಿ ಪಿಯು ಕಾಲೇಜಿನ ಉಪನ್ಯಾಸಕರಾದ ನಾಗರಾಜ್ ಹಾಗೂ ಸುಜನ್ ಕುಮಾರ್ ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ಗಿರೀಶ್ ಹಾಗೂ ಯೋಗಿಶ್ ಸಹಕರಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
